ರಾಯಚೂರು ಜಿಲ್ಲೆಯಲ್ಲಿ ಮೊದಲಿಗೆ ನಗರಸಭೆ...
ರಾಯಚೂರು ಜಿಲ್ಲೆಯಲ್ಲಿ ಮೊದಲಿಗೆ ನಗರಸಭೆ ಚುನಾವಣೆ ನಂತರ ವಿಧಾನಸಭೆ ಚುನಾವಣೆ ಗದ್ದಲ. ಭೀಕರ ಬರ ಕಳೆದು ಸಮೃದ್ಧ ಮಳೆಯಾಗಿದ್ದು ವಿಶೇಷ. ಅಲ್ಪ ಅಭಿವೃದ್ಧಿ, ಸುದೀರ್ಘ ಹೋರಾಟ ಕಂಡ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ಸಂಭ್ರಮ. ಸರ್ಕಾರ ಬದಲಾದರೂ ಜಿಲ್ಲೆಯ ಹಣೆಬರೆಹ ಬದಲಿಲ್ಲ. ಹಳತು ಕಳೆದು ಹೊಸ ವರ್ಷಕ್ಕೆ ಜಿಲ್ಲೆ ಕಾಲಿಟ್ಟಿದೆ. ಜಿಲ್ಲೆಯು 2013ರಲ್ಲಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ರೈತರದ್ದು ಎಂದಿನಂತೆಯೇ ಹೋರಾಟದ ಬದುಕು. ಮಳೆ ಬಿಡದೇ ಸುರಿದು ಹಾನಿಯಾದರೂ ಅನೇಕ ಕಡೆ ಫಸಲು ಬಂದರೂ ಕೃಷಿ ಉತ್ಪನ್ನಕ್ಕೆ ಸೂಕ್ತ ಬೆಲೆಯಿಲ್ಲದೇ ರೈತರು ಪರದಾಡಿದರು.
ಹೋರಾಟಗಳ ಅಬ್ಬರ, ಸಮೃದ್ಧ ಕೃಷಿ ಛಾಯೆ
'ವಿಶೇಷ' ಸಂಭ್ರಮ
ವರ್ಷದ ಆರಂಭದಲ್ಲಿಯೇ ಕೇಂದ್ರ ಸರ್ಕಾರ 371ನೇ ಕಲಂ ಅಡಿ ಜಿಲ್ಲೆಗೆ ವಿಶೇಷ ಸ್ಥಾನಮಾನ ನೀಡಿದ ಸಂಭ್ರಮಾಚರಣೆ ನಡೆಯಿತು. ನವೆಂಬರ್ನಲ್ಲಿ ಕಳೆದೊಂದೂವರೆ ವರ್ಷದಿಂದ ಮುಚ್ಚಿದ್ದ ಒಪೆಕ್ ಆಸ್ಪತ್ರೆ ಪುನಾರಂಭಗೊಂಡು ಹೈ.ಕ. ಭಾಗಕ್ಕೆ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಪುನಾ ತಂದಿತು. ಹಾಗೆಯೇ ಆಸ್ಪತ್ರೆಯಲ್ಲಿ ನೌಕರಿಗೆ ಹೋರಾಟ ನಡೆಸಿದ್ದ 200ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗದ ಭರವಸೆ ಮೂಡಿತು. ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣ ಉದ್ಘಾಟನೆಯಾಗಿದ್ದು ವಿಶೇಷ.
ತಾರಾ ಮೆರುಗು
ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯು ರಾಜ್ಯದ ಗಮನ ಸೆಳೆಯಿತು. ಅದಕ್ಕೆ ಮಳೆ ಹುಡುಗಿ ಪೂಜಾಗಾಂಧಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಕಾರಣ. ರಾಯಚೂರು ನಗರ ಕ್ಷೇತ್ರದಲ್ಲಿ ಬಿಎಸ್ಸಾರ್ ಪಕ್ಷದಿಂದ ಸ್ಪರ್ಧಿಸಿದ ಪೂಜಾ ಗಾಂಧಿ ಎಲ್ಲರ ಗಮನ ಸೆಳೆದರೂ ಮತ ಸೆಳೆಯುವಲ್ಲಿ ಸೋತರು. ರಾಯಚೂರಿನಲ್ಲಿಯೇ ಇರುತ್ತೇನೆ ಎಂದು ಹೇಳಿದ ಅವರು ಮತ್ತೆ ಇತ್ತ ಹೊರಳಿ ನೋಡಲಿಲ್ಲ.
ಇನ್ನು ರಾಹುಲ್ ಗಾಂಧಿ ಹೋಗಿ ಪ್ರಚಾರ ಮಾಡಿದಲ್ಲೆಲ್ಲ ಕಾಂಗ್ರೆಸ್ ಗೆ ಸೋಲಾಗಿದೆ ಎಂಬುದಕ್ಕೆ ಅಪವಾದವೆಂಬಂತೆ ಸಿಂಧನೂರಿಗೆ ರಾಹುಲ್ ಬಂದು ಹೋಗಿದ್ದರಿಂದಲೇ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ನಾಲ್ಕು ಕಡೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲವಾಯಿತು.
ಕೃಷಿಗೆ ಲಾಠಿ ಏಟು!
ಮೊದಲ ಹಂಗಾಮಿಗೆ ರೈತರು ಬೆಳೆದ ಬೆಳೆಗೆ ಮಳೆಯ ಅಬ್ಬರದ ಕಾಟವಾದರೆ ಎರಡನೇ ಹಂಗಾಮಿಗೆ ಚಳಿಯ ಕಿರಿಕಿರಿ ಹಾಗೂ ತುಂಗಭದ್ರಾ ಮತ್ತು ಕೃಷ್ಣಾ ನದಿ ನೀರಾವರಿ ಯೋಜನೆಗಳಡಿ ನೀರಿನದ್ದೇ ಅಭಾವ. ಪರಿಣಾಮ ರೈತರು ರಸ್ತೆ ತಡೆಗೆ ಮುಂದಾಗಬೇಕಾಯಿತು. ನೀರಾವರಿ ಅಧಿಕಾರಿಗಳಿಂದ ಮತ್ತೆ ಸಮಸ್ಯೆ ನೀಗಿಸುವ ಭರವಸೆ. ಬತ್ತ, ಹತ್ತಿ, ತೊಗರಿ ಖರೀದಿ ಕೇಂದ್ರ ತೆರೆಯಬೇಕೆಂಬ ರೈತರ ಬೇಡಿಕೆಗೆ ಬೆಲೆ ಬರಲಿಲ್ಲ. ಜಿಲ್ಲೆಯು ಬೃಹತ್ ಹತ್ತಿ ಮಾರುಕಟ್ಟೆಯಿದ್ದರೂ ರೈತರಿಗೆ ಪ್ರಯೋಜನವಾಗಲಿಲ್ಲ ಎಂಬ ದೂರು. ಬತ್ತದ ದರ ಕುಸಿತದ ಹಿನ್ನೆಲೆ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ ಎಂಬ ಸರ್ಕಾರ ಆದೇಶ ಮಾರುಕಟ್ಟೆಯಲ್ಲಿಯೇ ಬತ್ತದ ದರ ಏರಿಸಿತು. ಇನ್ನು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ನಡೆಸಿದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿ ರೈತರ ಮೇಲೆ ಲಾಠಿ ಪ್ರಹಾರ ನಡೆದಿದ್ದು, 2013ರ ಕೆಟ್ಟ ಗಳಿಗೆ. ಜಿಲ್ಲಾಡಳಿತ ರೈತರನ್ನು ಸರ್ಕಾರಿ ಜಮೀನಿನಿಂದ ಒಕ್ಕಲೆಬ್ಬಿಸುವುದನ್ನು ವಿರೋಧಿಸಿದ ರೈತರಿಗೆ ಲಾಠಿಯೇಟಿನ ಪ್ರತಿಫಲ ನೀಡಿತು.
ಆಂಧ್ರಕ್ಕೆ ರೈಲು ಸಂಪರ್ಕ
2013ರಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡರೂ ಬೇಗ ಮುಗಿಯದೇ ಪರದಾಟ ಅನಿವಾರ್ಯವಾಯಿತು. ನಗರದ ಬಸವೇಶ್ವರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಳ್ಳದೇ ಜನ ಸಂಚಾರಕ್ಕೆ ಸಮಸ್ಯೆ ಯಾಯಿತು. ಸುಗಮ ಸಂಚಾರ ಕನಸಿನ ಮಾತಾಯಿತು. ಬಸವೇಶ್ವರ ವೃತ್ತದ ಸೇತುವೆ ತಡವಾಗಿದ್ದರಿಂದ ಒತ್ತಡಕ್ಕೆ ಸಿಲುಕಿದ ಜಿಲ್ಲಾಡಳಿತ ಕಳೆದ ಅನೇಕ ವರ್ಷಗಳಿಂದ ಸ್ಥಗಿತಗೊಂಡಿದ್ದ ನಗರದ ಬೈಪಾಸ್ ರಸ್ತೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದು ಅನುಕೂಲ ತಂದಿತು. ಇನ್ನು ಆರ್ಟಿಒ ಕಚೇರಿ ಯಿಂದ ಎಸ್ಪಿ ಕಚೇರಿವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಮುಗಿಯಿತು ಎಂದು ಜಿಲ್ಲಾಡಳಿತ ಹೇಳಿದರೂ, ಕಳಪೆ ಕಾಮಗಾರಿ, ಅಲ್ಲಲ್ಲಿ ಕಟ್ಟಡಗಳ ತೆರವು ಸ್ಥಗಿತದಿಂದ ರಸ್ತೆ ಅಗಲೀಕರಣ ನಿಷ್ಪ್ರಯೋಜಕವೆನಿಸಿತು. ರಸ್ತೆಯ ಮಧ್ಯೆ ವಿಭಜಕಗಳನ್ನು ನಿರ್ಮಸಿದ್ದೊಂದೇ ಸಾಧನೆ ಎನ್ನುವಷ್ಟು ಅವ್ಯವಸ್ಥೆಗೆ ದಾರಿಯಾಯಿತು. ಭಾರೀ ಮಳೆಗೆ ರಸ್ತೆ, ಸೇತುವೆ ಹಾನಿಗೀಡಾದರೆ, ಮತ್ತೊಂದೆಡೆ ಮಳೆಯಾದ ನಂತರ ಅವುಗಳು ದುರಸ್ತಿ ಭಾಗ್ಯ ಕಂಡವು.
ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹೆಬೂಬ್ ನಗರ-ಮುನಿರಾಬಾದ್ ನೂತನ ರೈಲು ಮಾರ್ಗದ ನಿರ್ಮಾಣ ಕಾರ್ಯ ಈ ವರ್ಷ ಆರಂಭಗೊಳ್ಳಲಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲಿಯೇ ಯೋಜನೆ ತೆವಳುವುದು ಮುಂದುವರಿಯಿತು. ವರ್ಷದ ಕೊನೆಗೆ ಗದ್ವಾಲ್-ರಾಯಚೂರು ಮಧ್ಯೆ ನೂತನ ರೈಲು ಮಾರ್ಗ ಕಾರ್ಯಾರಂಭಗೊಂಡು ಆಂಧ್ರದ ರಾಜಧಾನಿಗೆ ರೈಲು ಸಂಪರ್ಕ ಸಾಧ್ಯವಾಯಿತು. ಹಾಗೆಯೇ ಮಟಮಾರಿ-ಮಂತ್ರಾಲಯಂ ರೋಡ್ ನಿಲ್ದಾಣಗಳ ಮಧ್ಯೆ ಜೋಡಿ ಮಾರ್ಗ ನಿರ್ಮಾಣಕ್ಕೂ ಚಾಲನೆ ದೊರೆತಿದ್ದು ಸಂತಸ ತಂದಿತು.
ನಡುಗಡ್ಡೆ ಗ್ರಾಮ!
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ 10.6 ಮತ್ತು 10.8 ಕಿಮೀ ಬಳಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಯಿತು. ನಾರಾಯಣಪುರ ಜಲಾಶಯದಲ್ಲಿ 487.510 ಮೀಟರ್ ನೀರು ಸಂಗ್ರಹ. ರಸಗೊಬ್ಬರ ಅಭಾವ, ಕಳಪೆ ಬೀಜ ಪೂರೈಕೆ ಆರೋಪ ರೈತ ಸಂಘಟ ಪ್ರತಿಭಟನೆ. ಶಾಸಕ ಮಾನಪ್ಪ ವಜ್ಜಲ್ ಸಹೋದರರ ನಿವಾಸಕ್ಕೆ ಕೇಂದ್ರ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ಅಳತೆ ಕಾರ್ಯ. ಕೃಷ್ಣಾ ನದಿಗೆ 2.06 ಕ್ಯೂಸೆಕ್ ನೀರು ಬಿಡುಗಡೆ, ಶೀಲಹಳ್ಳಿ ಸೇತುವೆ ಮೇಲೆ ತುಂಬಿ ಹರಿದ ನೀರು ನಡುಗಡ್ಡೆ ಗ್ರಾಮಸ್ಥರ ಸಂಚಾರ ಕಡಿತ. ತುರ್ತು ವಿಪತ್ತು ನಿರ್ವಹಣಾ ಪಡೆಯಿಂದ ಕರಕಲಗಡ್ಡಿ, ಮ್ಯಾದರಗಡ್ಡೆ ನಡುಗಡ್ಡೆ ನಿವಾಸಿಗಳ ರಕ್ಷಣಾ ಕಾರ್ಯಾಚರಣೆ.
ಮರಳು ದಂಧೆಗೆ ಬ್ರೇಕ್, ಶಂಕಿತ ಡೆಂಘೀ ಕಾಟ
ಒಳನಾಡು ಬಂದರು ಮತ್ತು ಜವಳಿ ಖಾತೆ ಸಚಿವ ಬಾಬೂರಾವ್ ಚಿಂಚನಸೂರು ಭೇಟಿ, ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸ್ಥಾಪನೆಗೆ ಚಿಂತನೆ.
ಲಿಂಗಸ್ಗೂರು ತಾಲೂಕಿನ ಹಾಲಬಾವಿ ಪ್ರಾಥಮಿಕ ಶಾಲೆಯಲ್ಲಿ ವಿಷಹಾರ ಸೇವಿಸಿದ ಸುಮಾರು 60 ಮಕ್ಕಳು ಲಿಂಗಸ್ಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು. ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಭೇಟಿ, ಹೈಕ ಭಾಗದ ಪ್ರೇಕ್ಷಣೀಯ ಸ್ಥಳಗಳ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಭರವಸೆ. ಲಿಂಗಸ್ಗೂರು ಪಟ್ಟಣದಲ್ಲಿ ಸರಣಿ ದರೋಡೆ. ಪಿಎಸ್ಐ ಸಿದ್ಧರಾಮಯ್ಯ ವರ್ಗಾವಣೆ. ಕೇಂದ್ರ ಮತ್ತು ರಾಜ್ಯ ರೈಲ್ವೇ ಯೋಜನೆಗಳ ಜಾರಿಗೆ ರೇಲ್ವೇ ಹೋರಾಟ ಸಮಿತಿ ಪೂರ್ವಭಾವಿ ಸಭೆ. ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಉದ್ಘಾಟನೆ ಹಾಗೂ ನೂತನ ಅಧ್ಯಕ್ಷರಾಗಿ ಸಿ. ಶರಣಪ್ಪ ಆಯ್ಕೆ. ನವಲಿ ಜಡಿಶಂಕರಲಿಂಗೇಶ್ವರ(ರಾಂಪೂರ) ಏತನೀರಾವರಿ ಯೋಜನೆ 2ನೇ ಹಂತದ ಕಾಮಗಾರಿ ಆರಂಭಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಶಂಕುಸ್ಥಾಪನೆ.
ಲಿಂಗಸ್ಗೂರು ತಾಲೂಕು ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರ. ಮುದಗಲ್ ಅಕ್ರಮ ಗ್ರಾನೈಟ್ ಗಣಿಗಾರಿಕೆ ತಡೆಗೆ ತನಿಖಾ ತಂಡದಿಂದ ಸರ್ವೆ ಕಾರ್ಯ. ಅಕ್ರಮ ಮರಳು ಸಾಗಣೆ ವಾಹನಗಳ ಮೇಲೆ ಪೊಲೀಸರ ದಾಳಿ 17 ಟ್ರಾಕ್ಟರ್ಗಳ ಜಪ್ತಿ. ಭಾರತೀಯ ವೈದ್ಯಕೀಯ ಸಂಘದ ಉತ್ತಮ ಸಾಧನೆ, ಚಟುವಟಿಗೆ ಗುರುತಿಸಿ ರಾಷ್ಟ್ರೀಯ ಪುರಸ್ಕಾರ. ಲಿಂಗಸ್ಗೂರು ಪುರಸಭೆ ಗಣಕೀಕೃತ ಆಡಳಿತ ವ್ಯವಸ್ಥೆ ಹೊಂದಿದ ರಾಜ್ಯದಲ್ಲಿ ಪ್ರಥಮ ಎಂಬ ಕೀರ್ತಿ. ತಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬಸಮ್ಮ ಯಾದವ್ ಆಯ್ಕೆ.
ಲಿಂಗಸ್ಗೂರು ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಚನ್ನವೀರಪ್ಪ ಅಧ್ಯಕ್ಷರಾಗಿ ಹಾಗೂ ಸಂಗಪ್ಪ ದೇಸಾಯಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ. ಕಸಬಾ ಲಿಂಗಸ್ಗೂರು ಕುಪ್ಪಿಭೀಮ ಜಾತ್ರಾ ಮಹೋತ್ಸವ. ಹುಲಿಗುಡ್ಡ ಗ್ರಾಮದ ಸ್ಮಶಾನ ಜಾಗೆ ವಿವಾದ ಗ್ರಾಮಸ್ಥರಿಂದ ಶವವಿಟ್ಟು ಪ್ರತಿಭಟನೆ, ಅರಣ್ಯ ಜಾಗೆ ನೀಡಲು ಅಧಿಕಾರಿಗಳ ಭರವಸೆ. ಫೂಲಭಾವಿ ಗ್ರಾಮದಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಶರಣಬಸವ ಮೃತ ಆರೋಪ, ಗ್ರಾಮಕ್ಕೆ ವೈದ್ಯರ ತಂಡ ಚಿಕಿತ್ಸಾ ಶಿಬಿರ. ಇಂತಹ ಹತ್ತು, ಹಲವು ಸಿಹಿ, ಕಹಿ ಘಟನೆಗಳನ್ನು ಮೆಲುಕು ಹಾಕುವ ಮೂಲಕ 2013 ಕ್ರೈಸ್ತ ವರ್ಷವನ್ನು ಆತ್ಮೀಯವಾಗಿ ಬೀಳ್ಕೊಟ್ಟು, ನೂತನ 2014ರ ವರ್ಷಾರಂಭಕ್ಕೆ ಪಾದಾರ್ಪಣೆ ಮಾಡಿದ್ದೇವೆ.
ಬಿ ಸ್ಕೀಂ ಭರವಸೆ
ಕೃಷ್ಣಾ ಬಿ ಸ್ಕೀಂ ಅಡಿ ನಂದವಾಡಗಿ ಏತ ನೀರಾವರಿ ಯೋಜನೆ ಸೇರಿ ಹಲವು ಉದ್ದೇಶಿತ ಕಾಮಗಾರಿಗಳ ಜಾರಿಗೆ ಸರ್ಕಾರ ಭರವಸೆ ನೀಡುವುದರಲ್ಲೇ ಕಾಲಕಳೆಯಿತು. ಆದರೆ ನಾರಾಯಣಪುರ ಬಲದಂಡೆ ಕಾಲುವೆಯನ್ನು ಸದ್ಯದ 95 ಕಿ.ಮೀ.ನಿಂದ 125ಕಿಮೀ ವರೆಗೆ ವಿಸ್ತರಿಸುವ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ವರ್ಷದ ಕೊನೆಗೆ ಅಡಿಗಲ್ಲು ಹಾಕಿದ್ದು, ಆಶಾಭಾವ ಮೂಡಿಸಿತು ತುಂಗಭದ್ರಾ ಎಡದಂಡೆಯಿಂದ ಎರಡನೇ ಬೆಳೆಗೆ ನೀರು ದೊರೆಯದೇ ರೈತರು ಹೋರಾಟಕ್ಕಿಳಿಯುವಂತಾಯಿತು. ಕಾಲುವೆಯ ಮೇಲ್ಭಾಗದ ರೈತರ ಅತೀಯಾದ ನೀರಿನ ಬಳಕೆಯಿಂದ ಕೆಳಭಾಗದ ರೈತರಿಗೆ ನೀರಿಲ್ಲವಾಯಿತು. ತುಂಗಭದ್ರಾ ಅಣೆಕಟ್ಟು ತುಂಬಿದೆ ನೀರಿನ ಕೊರತೆಯಿಲ್ಲ ಎಂದು ಮೊದಲು ಹೇಳಿದವರೇ ವರ್ಷದ ಕೊನೆಗೆ ನೀರಿನ ಅಭಾವವಿದೆ ಎಂದು ಮಾತು ಬದಲಿಸಿದರು.
ಕೊನೆಗಾಣದ ಹೋರಾಟ
ಜಿಲ್ಲೆಯಲ್ಲಿ 2013ರಲ್ಲಿ ಹೋರಾಟಗಳ ಸರಣಿ ಮುಂದುವರಿದಿತ್ತು. ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ಸಾಗಣೆ, ತಡೆರಹಿತ ವಿದ್ಯುತ್ ಮಾರ್ಗದ ಕಾಮಗಾರಿಯಲ್ಲಿನ ಅಕ್ರಮ, ಶೇ.22.75ರ ಅನುದಾನದ ದುರ್ಬಳಕೆ ವಿರುದ್ಧ ಹೋರಾಟ, ನಗರಸಭೆಯಲ್ಲಿನ ಅವ್ಯವಹಾರಕ್ಕೆ ಮುತ್ತಿಗೆಯಂಥ ಅನೇಕ ಹೋರಾಟಗಳು ನಡೆದರೂ ಕಠಿಣ ಕ್ರಮ ಜರುಗಿದ್ದು ತೀರಾ ಕಡಿಮೆ.
ಸರ್ಕಾರ ನಿಗದಿ ಮಾಡಿದ ಲೆವಿ ಅಕ್ಕಿ ಪ್ರಮಾಣ ಅತೀಯಾಯ್ತು ಎಂದು ಅಕ್ಕಿ ಗಿರಣಿಗಳ ಮಾಲೀಕರು ವರ್ಷದ ಕೊನೆಗೆ ಮುಷ್ಕರ ನಡೆಸಿದರು. ಸರ್ಕಾರ ಮಣಿಯಿತು, ಮುಷ್ಕರ ಮುಗಿಯಿತು. ಇನ್ನು ನ್ಯಾ.ಸದಾಶಿವ ಆಯೋಗದ ವರದಿ ಯಥಾವತ್ತು ಜಾರಿಗೆ ದಲಿತ ಸಂಘಟನೆಗಳ ಹೋರಾಟ ಯಥಾರೀತಿ ಸಾಗಿತು. ಆದರೆ ಪ್ರಯೋಜನ ಮಾತ್ರ ಶೂನ್ಯ. ಆಂಧ್ರದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿನ ಹೋರಾಟ ಜಿಲ್ಲೆಯ ಜನತೆಗೆ ಸಮಸ್ಯೆ ಉಂಟು ಮಾಡಿತು. ನೆರೆಯ ಆಂಧ್ರದೊಂದಿಗೆ ಸಂಪರ್ಕ ಕಡಿತಗೊಂಡು ವರ್ಷವಿಡೀ ಜನತೆ ಪರದಾಡಿದರು.
ಅಹೋರಾತ್ರಿ ಸಂಗೀತ
ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ವಿರಾಸತ್ ತಂಡದ ಅದ್ಭುತ ಕಲಾವೈಭವ ವರ್ಷದ ಆಕರ್ಷಣೆ. ಜತೆಗೆ ವರ್ಷದ ಕೊನೆಗೆ ಪಂ.ಸಿದ್ದರಾಮ ಜಂಬಲದಿನ್ನಿ ಸ್ಮರಣೆಯ 25ನೇ ಸಂಗೀತ ಸಮ್ಮೇಳನ ಅಹೋರಾತ್ರಿ ಸಂಗೀತ ಸುಧೆ ಹರಿಸಿತು. ಈಗ ಜಿಲ್ಲೆಯ ಜನತೆ ಹಲವಾರು ನಿರೀಕ್ಷೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿರಿಸಿದ್ದಾರೆ. ಹತ್ತು ಹಲವು ಕನಸುಗಳು ಸಾಕಾರಗೊಳ್ಳಲೆಂಬುದು ಜನರ ಆಶಯ.
ದುರಂತಗಳು
ಆರ್ಟಿಪಿಎಸ್ 8ನೇ ಘಟಕದ ಇಎಸ್ಪಿ ವಿಭಾಗದ ಕುಸಿತ ವಿದ್ಯುತ್ ಕಡಿತ ಹೆಚ್ಚಿಸಿತು. ವರ್ಷಾಂತ್ಯದ ಬೆಂಗಳೂರು-ನಾಂದೇಡ್ ರೈಲು ದುರಂತ ಜಿಲ್ಲೆಗೆ ಸೇರಿದ ಆರು ಜನರ ಜೀವ ಬಲಿ ಪಡೆಯಿತು.
ನೀರಿಗಾಗಿ ಧರಣಿ
ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಏತನೀರಾವರಿ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜಾವೂರ್ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು. ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ, ಸಚಿವ ರಾಜೂಗೌಡ ಹಾಗೂ ಶಾಸಕ ಮಾನಪ್ಪ ವಜ್ಜಲ್ ಭೇಟಿ ನೀಡಿ ನೀರು ಹರಿಸುವ ಭರವಸೆ ನೀಡಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಲಿಂಗಸ್ಗೂರು ಪುರಸಭೆ ಚುನಾವಣೆ, ನ್ಯಾಯವಾದಿಗಳ ಸಂಘದ ಚುನಾವಣೆ ಜರುಗಿದವು. ರಾಂಪುರ ಏತನೀರಾವರಿ ಯೋಜನೆಯ ಹೊಲಗಾಲುವೆ ಕಾಮಗಾರಿ ಆರಂಭಕ್ಕೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ ನೀಡಿದರು. ಹಮಾಲಿ ದರ ಹೆಚ್ಚಳಕ್ಕೆ ಆಗ್ರಹಿಸಿ ಕುಪ್ಪಿಭೀಮ ಹಮಾಲರ ಸಂಘದಿಂದ ಪ್ರತಿಭಟನೆ ನಡೆಸಿದರು. ರಾಯಚೂರು ಇನ್ ಚಾನೆಲ್ ವರದಿಗಾರ ಉಪೇಂದ್ರ ಕೇಶವರಾವ್ ಮೇಲೆ ಹಲ್ಲೆ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಪತ್ರಕರ್ತರು ಮನವಿ ಸಲ್ಲಿಸಿದರು.
ಗುತ್ತಿಗೆ ನೌಕರರ ಪ್ರತಿಭಟನೆ
ರಾಯಚೂರು: ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸೇವೆ ಕಾಯಂಗೆ ಆಗ್ರಹಿಸಿ ಮಂಗಳವಾರ ಹೈ.ಕ. ವಿಭಾಗದ ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಹೈ.ಕ. ಭಾಗಕ್ಕೆ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಇದರಡಿ ನೀಡುವ ಮೀಸಲಾತಿಯಲ್ಲಿ ಆರೋಗ್ಯ ಇಲಾಖೆಯ ಹೈ.ಕ.ಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ವೆಂಕಟರಾಮರೆಡ್ಡಿ, ಜಿಲ್ಲಾಧ್ಯಕ್ಷ ಶರಣಗೌಡ ಇದ್ದರು.