ಬಜೆಟ್ಗೂ ಮುನ್ನ ಶ್ವೇತಪತ್ರ ಹೊರಡಿಸಿ
ರಾಯಚೂರು: ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ ಮಂಡಿಸುವ ಸಿದ್ಧತೆಯಲ್ಲಿದೆ. ಅದಕ್ಕೂ ಮುನ್ನ ಕಳೆದ ಬಜೆಟ್ನ ನಂತರದಲ್ಲಿ ಬಿಡುಗಡೆ ಮಾಡಿದ ಹಣದ ಮಾಹಿತಿಯನ್ನು ಶ್ವೇತಪತ್ರದ ಮೂಲಕ ಜನತೆಗೆ ತಿಳಿಸುವಂತೆ ಜೆಡಿಎಸ್ ನಾಯಕ ಪಿ.ಜಿ.ಆರ್. ಸಿಂಧ್ಯಾ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಜೆಟ್ನಲ್ಲಿ 1 ಲಕ್ಷ ಕೋಟಿ ನಿಗದಿ ಮಾಡಿ ಆಗಿನ ಸಿಎಂ ಸದಾನಂದಗೌಡರು ಘೋಷಿಸಿದ್ದರು. ಆದರೆ ಆ ಪೈಕಿ ಶೇ.50ರಷ್ಟು ಅನುದಾನ ಬಿಡುಗಡೆಯಾಗಿಲ್ಲ. ಮೊದಲಿನ ಬಜೆಟ್ನ ಮಾಹಿತಿಯನ್ನು ಜನತೆಗೆ ಒದಗಿಸಿದ ನಂತರ ಮುಂದಿನ ಬಜೆಟ್ ಬಗ್ಗೆ ಸಿದ್ಧತೆ ಮಾಡಿಕೊಳ್ಳುವುದು ಸಮಂಜಸ ಎಂದರು.
ಕಿತ್ತಾಡಿದ್ದೇ ಸಾಧನೆ: ರಾಜ್ಯ ಬಿಜೆಪಿ ಸರ್ಕಾರ ಕೆಜೆಪಿ ಜತೆಗಿನ ಜಗಳದಲ್ಲಿ ಆಡಳಿತ ಯಂತ್ರ ಕುಸಿತ ಕಂಡಿದೆ. ಸಿಎಂ ಜಗದೀಶ ಶೆಟ್ಟರ್ ಅವರು ಕುರ್ಚಿ ಉಳಿಸಿಕೊಳ್ಳಲು ಪ್ರಯಾಸಪಡುತ್ತಿದ್ದಾರೆ. ಅದರ ಬದಲಿಗೆ ಅವರು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವಿದೆ. ಆಪರೇಷನ್ ಕಮಲ ಮತ್ತು ಸ್ಪೀಕರ್ ಸ್ಥಾನದ ದುರ್ಬಳಕೆ ಮಾಡಿಕೊಂಡಿದೆ. ಆ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸದೇ ಅಧಿಕಾರಕ್ಕಾಗಿ ಕಿತ್ತಾಡಿದ್ದೇ ಸಾಧನೆ ಎಂದರು.
ರಾಜಕೀಯ ಲಾಭದ ಹುನ್ನಾರ: ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು 371ನೇ ಕಲಂ ಜಾರಿಗೆ ತಾನೇ ಕಾರಣ ಎಂದು ಹೇಳಿಕೊಳ್ಳುವ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದೆ. ಈ ವಿಶೇಷ ಸ್ಥಾನಮಾನ ಪಡೆಯಲು ನಡೆದ ಹೋರಾಟದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅನೇಕ ಪ್ರಮುಖ ಹೋರಾಟಗಾರರು ಪಾಲ್ಗೊಂಡಿದ್ದರು. ಆದರೆ ಅದನ್ನು ಮರೆತು ಕೇಂದ್ರ ಸರ್ಕಾರದ ನಾಯಕರು ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದಂತೆ ಬಿಂಬಿಸುತ್ತಿದ್ದಾರೆಂದು ದೂರಿದರು.
ವಿದರ್ಭ ಮತ್ತು ತೆಲಂಗಾಣ ಪ್ರದೇಶದಲ್ಲಿ ವಿಶೇಷ ಸ್ಥಾನಮಾನ ನೀಡಿಕೆಗೆ ಸಂಬಂಧಿಸಿ ನಿಯಮಾವಳಿ ರೂಪಿಸುವಲ್ಲಿ ವಿಳಂಬ ಮಾಡಿದ್ದರಿಂದ ಪ್ರತ್ಯೇಕ ರಾಜ್ಯದ ಕೂಗಿಗೆ ದಾರಿಯಾಗಿದೆ. ಕೇವಲ ಸ್ಥಾನಮಾನ ನೀಡಿಕೆಯಿಂದ ಯಾವುದೇ ಪ್ರಯೋಜನವಾಗದು. ನಿಯಮಾವಳಿಗಳನ್ನು ತ್ವರಿತವಾಗಿ ರೂಪಿಸಿ ಜಾರಿಗೆ ತಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಫೆ.15ರ ನಂತರ ಪಟ್ಟಿ ಬಿಡುಗಡೆ: ಜೆಡಿಎಸ್ ಪಕ್ಷವು ಈಗಾಗಲೇ 120 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಫೆ.15ರ ನಂತರದಲ್ಲಿ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ. ಈಗಾಗಲೇ ಕೆಲವರಿಗೆ ಪಕ್ಷದ ಹೈಕಮಾಂಡ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲು ಸೂಚನೆ ನೀಡಿದೆ ಎಂದು ಹೇಳಿದರು.
ಪಕ್ಷದ ಸಂಘಟನೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶಗಳನ್ನು ರಾಜ್ಯಾದ್ಯಂತ ನಾಲ್ಕು ತಂಡಗಳಲ್ಲಿ ಪ್ರವಾಸ ಕೈಗೊಳ್ಳುವ ಕಾರ್ಯ ಜಾರಿಯಲ್ಲಿದ್ದು, ತಾವೂ ಸೇರಿದಂತೆ ಬಸನಗೌಡ ಪಾಟೀಲ್ ಯತ್ನಾಳ, ಚೆಲುವರಾಯಸ್ವಾಮಿ, ಜಮೀಲ್ ಅಹ್ಮದ್ ನೇತೃತ್ವದಲ್ಲಿ ವಿವಿಧೆಡೆ ಪ್ರವಾಸ ಕೈಗೊಂಡಿದ್ದು ಈ ವೇಳೆ ಆಕಾಂಕ್ಷಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಬಹುಮತ ತಂದುಕೊಡುವ ಮೂಲಕ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕಿದೆ. ಅಸ್ಥಿರ ಸರ್ಕಾರಗಳಿಂದಾಗಿ ಆಡಳಿತ ವ್ಯವಸ್ಥೆ ಕುಸಿತ ಕಂಡಿದ್ದು ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ಪಕ್ಷದ ಪ್ರಮುಖರಾದ ಬಂಡೆಪ್ಪ ಕಾಶೆಂಪುರ, ಚಿಕ್ಕಮಾದು, ಸಿ.ಎಚ್. ನೀರಾವರಿ, ಅಮರನಾಥ್, ಎಂ.ಎಸ್. ಪಾಟೀಲ್, ಮಹಾಂತೇಶ್ ಪಾಟೀಲ್ ಅತ್ತನೂರು, ಯುಸೂಫ್ ಖಾನ್, ವಿರೂಪಾಕ್ಷಿ, ಶಿವಶಂಕರ್, ಡಾ. ಶಿವರಾಜ್ ಪಾಟೀಲ್, ಅನೇಕರಿದ್ದರು.