ಟೆಲೆಂಡ್ ರೈತರಿಗೆ ನೀರು ಬಿಡಲು ಆಗ್ರಹ
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 54ನೇ ವಿತರಣಾ ಕಾಲುವೆ ವ್ಯಾಪ್ತಿಯ 6 ಎಲ್ ಮತ್ತು 8 ಎಲ್ ಕಾಲುವೆಗಳಿಗೆ ನೀರು ಹರಿಸುವಂತೆ ಕೆಳಭಾಗದ ರೈತರು ಮಸ್ಕಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಒತ್ತಾಯಿಸಿದರು.
ತಾಲೂಕಿನ ಜಂಗರಟ್ಟಿ, ಸುಲ್ತಾನಪುರ, ಕಲ್ಲೂರ, ಮುಳ್ಳೂರು, ಪಗಡದಿನ್ನಿಕ್ಯಾಂಪ್, ಕುನ್ನಟಗಿಕ್ಯಾಂಪ್, ತಿಪ್ಪನಟ್ಟಿ, ಬಸಾಪುರ, ರಂಗಾಪುರ, ರಂಗಾಪುರಕ್ಯಾಂಪ್ ಮತ್ತಿತರ ಗ್ರಾಮಗಳ ನೂರಾರು ರೈತರು ಮಸ್ಕಿಗೆ ತೆರಳಿ ಅಧಿಕಾರಿಗಳ ಜೊತೆಗೆ ಸುದೀರ್ಘವಾಗಿ ಚರ್ಚೆಸಿದರು.
ಫೆ.1ರಿಂದ 6 ಎಲ್ ಮತ್ತು 8 ಎಲ್ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ವಾಪಸು ತೆಗೆದುಕೊಳ್ಳುವಂತೆ ರೈತರು ಒತ್ತಾಯಿಸಿದರು. ಈಗಾಗಲೇ ಬತ್ತ ನಾಟಿ ಮಾಡಲಾಗಿದೆ. ಕೆಲವರು ಎಳ್ಳು, ಜೋಳ ಮತ್ತಿತರ ಬೆಳೆಗಳನ್ನು ಹಾಕಿದ್ದಾರೆ. ಅವು ಒಣಗದಂತೆ ಗಮನಹರಿಸಬೇಕೆಂದು ನೀರಾವರಿ ಅಧಿಕಾರಿಗಳ ಗಮನ ಸೆಳೆದರು.
ರೈತರ ಒತ್ತಡಕ್ಕೆ ಮಣಿದ ಎಂಜಿನಿಯರ್, ವಾರದಲ್ಲಿ ಒಂದು ದಿನ ಮಾತ್ರ ಸ್ಥಗಿತಗೊಳಿಸಿ ಕೆರೆಗಳಿಗೆ ನೀರು ತುಂಬುತ್ತೇವೆ. ಇನ್ನುಳಿದ ದಿನಗಳಲ್ಲಿ ಕೆಳಭಾಗದ ರೈತರಿಗೆ ನೀರು ಹರಿಸುತ್ತೇವೆ ಎಂದು ಭರವಸೆ ನೀಡಿದರು. ಕಲ್ಲೂರಿನ ಕರೇಗೌಡ, ತಾಪಂ ಮಾಜಿ ಸದಸ್ಯ ನಂದಪ್ಪ ಸಾಹುಕಾರ, ಶಂಕ್ರಪ್ಪ ಅಡ್ಡಿ, ಯಮನಪ್ಪ ಮಲ್ಲಾಪುರ, ಸಾಂಬಶಿವರಡ್ಡಿ ಮತ್ತಿತರ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು.