ಇಳುವರಿ ಕುಸಿತ: ಲೆವಿ ಸಂಗ್ರಹಕ್ಕೆ ಬಿಹಾರದಿಂದ ಅಕ್ಕಿ ಖರೀದಿ
ರಾಯಚೂರು: ರಾಜ್ಯದಲ್ಲಿ ಅಕ್ಕಿ ದರ ಗಗನಮುಖಿಯಾಗಿದೆ. ಅದರಲ್ಲೂ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ಎಡದಂಡೆಯಲ್ಲಿ ನೀರಿನ ಕೊರತೆಯಾಗಿದೆ. ಪರಿಣಾಮ ಬತ್ತದ ಬೆಳೆ ಇಳುವರಿಯಲ್ಲಿ ಕುಸಿತವಾಗಿದೆ. ಅಕ್ಕಿ ಗಿರಣಿಗಳ ಮಾಲೀಕರು ರಾಜ್ಯ ಸರ್ಕಾರಕ್ಕೆ ಲೆವಿ ಅಕ್ಕಿ ನೀಡಲು ಸದ್ಯ ಬಿಹಾರದಿಂದ ಅಕ್ಕಿ ಖರೀದಿಸಿ ತಂದು ಸರ್ಕಾರಕ್ಕೆ ಒಪ್ಪಿಸುವಂತಾಗಿದೆ.
ನಗರದ ರೈಲು ನಿಲ್ದಾಣಕ್ಕೆ ಸೋಮವಾರ ಬಿಹಾರದಿಂದ ಲೆವಿ ಅಕ್ಕಿ ನೀಡಲು 2,600 ಮೆಟ್ರಿಕ್ ಟನ್ ಅಕ್ಕಿ ಆಮದು ಮಾಡಿಕೊಂಡಿರುವುದು ಕಂಡುಬಂದಿತು.
2,600 ಮೆ.ಟನ್ ಆಮದು: ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಅದರ ಸುತ್ತಲಿನ 8 ಅಕ್ಕಿ ಗಿರಣಿಗಳ ಮಾಲೀಕರು ಬಿಹಾರದಿಂದ ಅಕ್ಕಿ ತರಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಲೆವಿ ಸಂಗ್ರಹವನ್ನು ಕೊರತೆಯಿದ್ದರೂ ಕೈಬಿಡುವುದಿಲ್ಲ. ಹೀಗಾಗಿ ಮಾಲೀಕರು ಅನಿವಾರ್ಯವಾಗಿ ಬಿಹಾರದಿಂದ 2,600 ಮೆಟ್ರಿಕ್ ಟನ್ ಲೆವಿ ಅಕ್ಕಿಯನ್ನು ನಗರದ ಮೂಲಕ ಕಾರಟಗಿ ಪಟ್ಟಣಕ್ಕೆ ಸಾಗಣೆ ಮಾಡಿಕೊಂಡಿದ್ದಾರೆ. ಪ್ರತಿ ಕ್ವಿಂಟಲ್ಗೆ 1,700 ಮತ್ತು ಸಾಗಣೆ ವೆಚ್ಚ ಸೇರಿದಂತೆ ಒಟ್ಟು 2,050 ಪ್ರತಿ ಕ್ವಿಂಟಲ್ಗೆ ಹಣ ತೆತ್ತು ಅಕ್ಕಿ ಗಿರಣಿ ಮಾಲೀಕರು ಅಕ್ಕಿ ಆಮದು ಮಾಡಿಕೊಂಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾರಟಗಿಯ ಅಕ್ಕಿ ಗಿರಣಿ ಮಾಲೀಕ ಎನ್.ಶ್ರೀನಿವಾಸ್, ಅಕ್ಕಿ ಲೆವಿ ನೀಡಲು ಸಾಕಷ್ಟು ಪ್ರಮಾಣದ ಬತ್ತ ಲಭ್ಯವಿಲ್ಲ. ಈಗಾಗಲೇ ಎಲ್ಲೆಡೆ ಕೊರತೆಯಿಂದಾಗಿ ಅಕ್ಕಿ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಲೆವಿ ಅಕ್ಕಿ ಸಲ್ಲಿಕೆ ಅನಿವಾರ್ಯವಾಗಿ ದೂರದ ಬಿಹಾರದಿಂದ ಅಕ್ಕಿ ಖರೀದಿಸಿದ್ದಾಗಿ ತಿಳಿಸಿದರು.