ಮಹೋತ್ಸವದಲ್ಲಿ ವಿವಿಧ ಪ್ರಶಸ್ತಿ ಪ್ರದಾನ
ರಾಯಚೂರು: ನಗರದ ಯಾದವ್ ಸಂಘದ ಮೈದಾನದಲ್ಲಿ ನಡೆಯುತ್ತಿರುವ 31ನೇ ಶ್ರೀಮನ್ಯಾಯ ಸುಧಾಮಂಗಳ ಮಹೋತ್ಸವದಲ್ಲಿ ಸೋಮವಾರ ಉಡುಪಿಯ ಪೇಜಾವರ ಮಠದಿಂದ ಕೊಡ ಮಾಡುವ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಆಧ್ಯಾತ್ಮ ಕ್ಷೇತ್ರದಲ್ಲಿನ ಸಾಧನೆಗೆ ನೀಡಲಾಗುವ ವಿದ್ಯಾಮಾನ್ಯ ಪ್ರಶಸ್ತಿಯನ್ನು ಬೆಂಗಳೂರಿನ ಗುತ್ತಲ ರಂಗಾಚಾರ್ಯ ಅವರಿಗೆ ವಿಶ್ವೇಶತೀರ್ಥರು ಪ್ರದಾನ ಮಾಡಿ, 1 ಲಕ್ಷ ನಗದು ಮತ್ತು ಶಾಲು ಹೊದಿಸಿ ಸತ್ಕರಿಸಿದರು.
ಅದೇ ರೀತಿ ಅಧೋಕ್ಷಜತೀರ್ಥ ಪ್ರಶಸ್ತಿಯನ್ನು ಬೆಂಗಳೂರಿನ ಸತ್ಯಧ್ಯಾನಾಚಾರ್ಯ ಕಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. 25 ಸಾವಿರ ನಗದು ಮತ್ತು ಶಾಲು ಹೊದಿಸಿ ಶ್ರೀಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಉತ್ತರಾದಿ ಮಠದ ಮಠಾಧೀಶರಾದ ಸತ್ಯಾತ್ಮತೀರ್ಥರು, ವಿಶ್ವಪ್ರಸನ್ನ ತೀರ್ಥರು, ರಘು ವಿಜಯತೀರ್ಥರು, ವಿಶ್ವ ನಂದನತೀರ್ಥರು, ವಿಶ್ವಭೂಷಣತೀರ್ಥರು, ಬನ್ನಂಜೆ ರಾಘವೇಂದ್ರತೀರ್ಥರು ಮತ್ತಿತರರು ಸಾನ್ನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡಿದರು. ಇದೇ ವೇಳೆ ಉತ್ತರಾದಿ ಮಠದ ಸತ್ಯಾತ್ಮತೀರ್ಥರು ಸುಧಾನುವಾದ ಮಾಡಿದ 31 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನೀಡಿ ಗೌರವಿಸಿದರು. ನೂರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.