'ದುಶ್ಚಟ ದೂರ ಮಾಡಿದರೆ ಸಮಾಜದಲ್ಲಿ ಶಾಂತಿ'
ಸಿಂಧನೂರು: ಮದ್ಯಪಾನ, ಡ್ರಗ್ಸ್ ಸೇವನೆ, ಇಸ್ಪೀಟ್ ಮತ್ತಿತರ ದುಶ್ಟಟಗಳ ನಿರ್ಮೂಲನೆಯಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ದಾವಣಗೆರೆ ಮುರುಘಾಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಆರ್ಜಿಎಂ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ವಿಶ್ವಶಾಂತಿ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಭ್ರಷ್ಟಾಚಾರ, ಭ್ರೂಣಹತ್ಯೆ, ಜಾತೀಯತೆ, ಧಾರ್ಮಿಕ ಸಂಘರ್ಷಗಳು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತಂದಿವೆ ಎಂದು ಹೇಳಿದರು.
ಮನುಷ್ಯನ ವಿಕಾರ ಭಾವನೆಗಳು ವಿಪರೀತಕ್ಕೆ ತಲುಪಿವೆ. ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಸಮಾಜದಲ್ಲಿ ಆತಂಕ ಸೃಷ್ಟಿಸಿವೆ ಎಂದು ವಿವರಿಸಿದರು.
ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ, ಎಲ್ಲ ಧರ್ಮಗಳು ನೀತಿ ಮತ್ತು ಪ್ರೀತಿಯನ್ನೇ ಸಾರಿವೆ. ಆದರೆ ಅನ್ಯಾಯಗಳು ನಿಜವಾದ ಉದ್ದೇಶ ತಿಳಿಯದೆ ಸಮಾಜದ ಸ್ವಾಸ್ಥ್ಯ ಹದಗೆಡಿಸಿದ್ದಾರೆ ಎಂದರು.
ಬಳ್ಳಾರಿ ಧರ್ಮಕ್ಷೇತ್ರದ ಫಾದರ್ ಆಂತೋನಿ ರಾಜ್ ಮಾತನಾಡಿ, ಭಗವಂತನ ಆಜ್ಞಾಪಾಲನೆಯನ್ನು ಉಲ್ಲಂಘಿಸುವ ಚಟುವಟಿಕೆಯಿಂದ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಸೃಷ್ಟಿಕರ್ತನು ಮನುಷ್ಯನಿಗೆ ನೀಡಿದ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೇಕ್ ಬಷೀರ್ ಅಹ್ಮದ್, ದೇವ ಭಯದಿಂದ ಜೀವನ ನಡೆಸಿದರೆ ಸಮಾಜದಲ್ಲಿ ಸಾಮರಸ್ಯವಿರುತ್ತದೆ ಎಂದರು.
ಉಮರ ಶರೀಪ್, ಡಾ. ಹಫೀಜ್ ಮಾತನಾಡಿದರು. ಮಹ್ಮದ್ ಸಜ್ಜಾದ ನಿರೂಪಿಸಿದರು. ಸಾಕೀಬ್ ಉಬ್ರಿ ಕುರಾನ್ ಪಠಣ ಮಾಡಿದರು. ಇಲಿಯಾಸ್ ಕನ್ನಡ ಅನುವಾದ ಓದಿದರು.