ಶಿಕ್ಷಕರ ನೇಮಕಾತಿ ಸದ್ಯಕ್ಕಂತೂ ಬೇಡವೇ ಬೇಡ
ರಾಯಚೂರು: 371ನೇ ಕಲಂ(ಜೆ) ಅಡಿ ವಿಶೇಷ ಸ್ಥಾನಮಾನದ ಕಾನೂನು ರೂಪಿಸಿದ ನಂತರದಲ್ಲಿಯೇ ರಾಜ್ಯದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುವಂತೆ ಆಗ್ರಹಿಸಿ ಫೆ.8ರಂದು ಕರ್ನಾಟಕ ಜನತಾ ಪಾರ್ಟಿ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಮುಖಂಡ ಹರವಿ ಶಂಕರಗೌಡ ಹೇಳಿದರು.
ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಈಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಪ್ರಕಟಿಸಿದೆ. ರಾಜ್ಯದ ವಿವಿಧೆಡೆ ಒಟ್ಟು 4ಸಾವಿರ ಹುದ್ದೆಗಳ ನೇಮಕಾತಿ ನಡೆಯಲಿದೆ. ಆದರೆ ಸದ್ಯ ನೇಮಕಾತಿ ಮಾಡುವುದರಿಂದ ಶಿಕ್ಷಕರ ಕೊರತೆ ಈ ಭಾಗದಲ್ಲಿ ಪರಿಹಾರವಾಗದು ಎಂದು ಎಚ್ಚರಿಸಿದರು.
ವರ್ಗಾವಣೆ ಪರಿಪಾಠ: ಇದುವರೆಗೆ ರಾಜ್ಯದ ಇತರೆ ಭಾಗದಿಂದ ಹೈ. ಕ. ಪ್ರದೇಶದಲ್ಲಿ ಅನೇಕರು ಶಿಕ್ಷಕರಾಗಿ ನೇಮಕಗೊಂಡು 6 ತಿಂಗಳವರೆಗೆ ಕಾರ್ಯನಿರ್ವಹಿಸಿ ನಂತರ ತಮ್ಮ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಪರಿಪಾಠವಿದೆ. ಅದರಿಂದಾಗಿ ಪ್ರತಿ ಬಾರಿ ನೇಮಕಾತಿ ನಡೆದ ನಂತರದಲ್ಲಿ ಬೇರೆ ಜಿಲ್ಲೆಯ ಶಿಕ್ಷಕರು ವರ್ಗಾವಣೆ ಮಾಡಿಸಿಕೊಳ್ಳುವುದರಿಂದ ಜಿಲ್ಲೆಯಲ್ಲಿ ಶಿಕ್ಷಕರ ಹುದ್ದೆಗಳು ನಿರಂತರವಾಗಿ ಖಾಲಿ ಉಳಿಯುತ್ತವೆ. ಅದರಿಂದ ಮಕ್ಕಳ ಕಲಿಕೆಗೆ ತೊಡಕಾಗಿದೆ ಎಂದು ಆರೋಪಿಸಿದರು.
ಹೈ.ಕ. ಭಾಗದಲ್ಲಿ 1675 ಶಿಕ್ಷಕರ ಹುದ್ದೆಗಳಿದ್ದು, ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೂಡಲೇ ತಡೆಯಬೇಕು. 371ನೇ ಕಲಂ (ಜೆ) ಅಡಿ ವಿಶೇಷ ಸ್ಥಾನಮಾನದ ಕಾನೂನು ರೂಪಿಸಿ ಈ ಭಾಗದ ಜನರಿಗೆ ಮೀಸಲಾತಿ ಕಲ್ಪಿಸಿದ ನಂತರವೇ ನೇಮಕಾತಿಗೆ ಮುಂದಾಗಲು ಆಗ್ರಹಿಸಿದರು.
ಅನ್ಯಾಯ: ಸದ್ಯದ ರೀತಿಯಲ್ಲಿ ರಾಜ್ಯ ಸರ್ಕಾರ ನೇಮಕಾತಿಗೆ ಮುಂದುವರಿದರೆ ಈ ಭಾಗದ ಅಭ್ಯರ್ಥಿಗಳು ತೀರಾ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ನೇಮಕಾತಿಗೆ ರಾಜ್ಯಪಾಲರೂ ಸಮ್ಮತಿಸಿರುವುದು ಈ ಭಾಗದವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದರು.
ಹೈ.ಕ. ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಿಕೆ ನಿಟ್ಟಿನಲ್ಲಿ ಸ್ಥಳೀಯರನ್ನೇ ಶಿಕ್ಷಕರಾಗಿ ನೇಮಿಸುವ ಅವಶ್ಯಕತೆಯಿದೆ.
ಅಷ್ಟೇ ಅಲ್ಲ ಸ್ಥಳೀಯ ನೇಮಕಾತಿಯಿಂದ ವರ್ಗಾವಣೆಯ ಸಮಸ್ಯೆ ಉದ್ಭವವಾಗದೇ ಶಾಶ್ವತವಾಗಿಶಿಕ್ಷಕರ ಒತ್ತಾಯ: ಕೊರತೆಯ ಸಮಸ್ಯೆ ಪರಿಹಾರ ಕಾಣಲಿದೆ ಎಂದು ಹೇಳಿದರು.
ಕಾರಣ ರಾಜ್ಯ ಸರ್ಕಾರ ಕೂಡಲೇ ಶಿಕ್ಷಕರ ನೇಮಕಾತಿ ತಡೆಯಬೇಕು. ಇಲ್ಲವೇ ಹೈ.ಕ. ಭಾಗದಲ್ಲಿನ 1675 ಶಿಕ್ಷಕರ ಹುದ್ದೆಗಳ ಭರ್ತಿಯನ್ನು ವಿಶೇಷ ಸ್ಥಾನಮಾನದ ಕಾನೂನುಗಳು ಜಾರಿಯಾದ ನಂತರದಲ್ಲಿ ನೇಮಕಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಂತೆ ಹರವಿ ಶಂಕರಗೌಡ ಒತ್ತಾಯಿಸಿದರು.
ಫೆ.8ರಂದು ನಗರದಲ್ಲಿ ಕೆಜೆಪಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ.
ನಗರ ಸೇರಿದಂತೆ ಜಿಲ್ಲೆಯ ಎಲ್ಲ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಪಕ್ಷದ ಪ್ರಮುಖರಾದ ರಂಗನಾಥ ರೆಡ್ಡಿ, ಅಮೀನುದ್ದೀನ್, ಶಿವಕುಮಾರ್ ಪೊಲೀಸ್ ಪಾಟೀಲ್, ಪವನ್ ಪಾಟೀಲ್ ಮತ್ತಿತರರು ಇದ್ದರು.
'ಸರ್ಕಾರ ತನ್ನ ನಿಲುವು ಬದಲಿಸಲಿ'
ಸಿಂಧನೂರು: ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವ 371(ಜೆ) ವಿಧಿ ಸಂಪೂರ್ಣ ಜಾರಿಯಾಗುವವರೆಗೆ ಶಿಕ್ಷಕರ ನೇಮಕಾತಿಯನ್ನು ಮಾಡಬಾರದೆಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೇಂದ್ರದ ರಾಜ್ಯ ಸಂಚಾಲಕ ಕೆ.ಬಾಳಪ್ಪ, ಬೀದರ್, ಬಳ್ಳಾರಿ ರಾಯಚೂರು, ಕೊಪ್ಪಳ, ಯಾದಗಿರಿ, ಗುಲ್ಬರ್ಗ ಜಿಲ್ಲೆಗಳಿಗೆ 2000ನೇ ಇಸ್ವಿಯಿಂದ ಡಿಇಡಿ ಮತ್ತು ಬಿಇಡಿ ತರಬೇತಿ ಹೊಂದಿದ ಸಹಸ್ರಾರು ನಿರುದ್ಯೋಗಿ ಯುವಕರಿಗೆ ಆದ್ಯತೆ ಕೊಡಬೇಕಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ 371ನೇ ಕಲಂ ಜಾರಿಗೊಳಿಸಿದ ನಂತರವೇ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಗ್ರಹಿಸಿದ್ದಾರೆ.
ಸರ್ಕಾರ ತನ್ನ ನಿಲುವನ್ನು ಮುಂದುವರೆಸಿದ್ದೇ ಆದರೆ ಹೈಕ ದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂ ಎಚ್ಚರಿಸಿದ್ದಾರೆ.