ಸಿರವಾರ, ಮಸ್ಕಿಗಳಿಗೆ ತಾಲೂಕು ಸ್ಥಾನಮಾನ
ರಾಯಚೂರು: ಜಿಲ್ಲೆಗೆ ಪ್ರಸಕ್ತ ರಾಜ್ಯ ಬಜೆಟ್ ನಲ್ಲಿ ಮತ್ತೆರಡು ತಾಲೂಕುಗಳ ಘೋಷಣೆಯ ಸಿಹಿ ಸುದ್ದಿ ಸಿಕ್ಕಿದೆ. ಆದರೆ ಇದನ್ನು ಹೊರತುಪಡಿಸಿ ಇನ್ನುಳಿದ ನಿರೀಕ್ಷೆಗಳಿಗೆ ಸಿಎಂ ಜಗದೀಶ್ ಶೆಟ್ಟರ್ ಪ್ರಾಮುಖ್ಯತೆ ನೀಡಿಲ್ಲ. ಪ್ರಸಕ್ತ ಬಜೆಟ್ ನಲ್ಲಿ ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಕ್ಕಿಲ್ಲ.
ಪ್ರಸಕ್ತ ಬಜೆಟ್ನಲ್ಲಿ ಜಿಲ್ಲೆಯ ಮತ್ತೆರಡು ತಾಲೂಕುಗಳ ರಚನೆಗೆ ನಡೆದಿದ್ದ ಹೋರಾಟಕ್ಕೆ ಮಣಿದಿರುವ ಸರ್ಕಾರ ಮಸ್ಕಿ ಮತ್ತು ಸಿರವಾರ ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ಬಜೆಟ್ನಲ್ಲಿ ಘೋಷಿಸಿದೆ. ಇದು ಈ ಎರಡೂ ಪಟ್ಟಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಸಂದ ಜಯವಾಗಿದೆ.
ಸೌಲಭ್ಯ ಸಾಧ್ಯವೇ?: ಎರಡು ಪಟ್ಟಣಗಳು ತಾಲೂಕು ಕೇಂದ್ರಗಳಾದಲ್ಲಿ ಅವುಗಳ ಸುತ್ತಲಿನ ಗ್ರಾಮಗಳಲ್ಲಿನ ಸಮಸ್ಯೆಗಳಿಗೂ ಪರಿಹಾರ ದೊರೆಯುವುದೆಂಬ ನಿರೀಕ್ಷೆ ಗರಿಗೆದರಿದೆ. ಆದರೆ ರಾಜ್ಯದಲ್ಲಿ ಬಜೆಟ್ನಲ್ಲಿ ಪ್ರಕಟಿಸಿರುವ ರಾಜ್ಯದ ಇನ್ನಿತರ ನೂತನ ತಾಲೂಕುಗಳೂ ಸೇರಿದಂತೆ ರು. 86 ಕೋಟಿ ನಿಗದಿ ಮಾಡಿರುವುದು ತಾಲೂಕು ಕೇಂದ್ರಗಳಲ್ಲಿ ಎಲ್ಲ ಅಗತ್ಯ ಮೂಲಸೌಲಭ್ಯ ದೊರಕಿಸಿಕೊಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.
ಜಿಲ್ಲೆಯ ರೈತರ ಜೀವನಾಡಿ ಕೃಷ್ಣಾ ನದಿಯ ನಾರಾಯಣಪುರ ಬಲದಂಡೆ ಕಾಲುವೆಯನ್ನು ಸದ್ಯದ 95 ಕಿಮೀ ನಿಂದ 157ಕಿಮೀವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಕೇಳಿಬರುತ್ತಿರುವ ಕೂಗಿಗೆ ಬಜೆಟ್ನಲ್ಲಿ ಬೆಲೆ ಬಂದಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆಯ ಆದುನೀಕರಣದ ಕಡೆಯ ಕಂತು ಸುಮಾರು ರು. 270ಕೋಟಿ ಕಾಮಗಾರಿ ಕೈಗೊಳ್ಳಬೇಕಿದೆ. ಕಾಲುವೆಯ ಆಧುನೀಕರಣದ ವಿಚಾರ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ. ಕೃಷಿ ವಿವಿ: ಇನ್ನು ನಗರದಲ್ಲಿ 2009ರಲ್ಲಿ ಆರಂಭಗೊಂಡಿರುವ ಕೃಷಿ ವಿವಿಗೆ ಸರ್ಕಾರ ವಿಶೇಷ ಅನುದಾನ ಪ್ರಕಟಿಸಿಲ್ಲ. ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ವಿವಿ ಹಣಕ್ಕಾಗಿ ಕಾದಿದೆ. ಆದರೆ ರಾಜ್ಯ ಸರ್ಕಾರ ಕೃಷಿ ವಿವಿಯತ್ತ ಹೆಚ್ಚಿನ ಗಮನ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ನಂದವಾಡಗಿ ಏತ ನೀರಾವರಿ ಯೋಜನೆಯ ತುರ್ತು ಜಾರಿ ಮೂಲಕ ನೀರಾವರಿ ಸೌಲಭ್ಯಕ್ಕೆ ಹೋರಾಟ ನಡೆದಿದ್ದರೂ ಬಜೆಟ್ನಲ್ಲಿ ಅದರ ಪ್ರಗತಿಗೆ ಅಗತ್ಯವಿರುವ ಅನುದಾನದ ಬಗ್ಗೆ ವಿಷಯವಿಲ್ಲ.ಜಿಲ್ಲೆಯಲ್ಲಿ ಭೀಕರ ಬರವಿದ್ದು, ಸರ್ಕಾರದಿಂದ ಅನುದಾನ ದೊರೆಯದೇ ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ.
ಗೋಶಾಲೆ: ಬರ ಹಿನ್ನೆಲೆ ರಾಜ್ಯ ಸರ್ಕಾರ ಗೋಶಾಲೆ ಸ್ಥಾಪಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಿದೆ. ಆದರೆ ಕಳೆದ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಿದ್ದ ಗೋಶಾಲೆಗಳು ನಿರ್ವಹಣೆ ಕೊರತೆಯಿಂದ ಜಾನುವಾರುಗಳಿಗೆ ಆಹಾರವಿಲ್ಲದೇ ಮುಚ್ಚಿದ್ದು ಮರೆಯುವಂತಿಲ್ಲ. ಈಗ ಗೋಶಾಲೆ ಪುನಾರಂಭ ಮಾಡುವುದು ಅಧಿಕಾರಿಗಳ ಪಾಲಿಗೆ ತಲೆನೋವಿನ ಸಂಗತಿಯೇ ಸರಿ.
ಕಲ್ಮಲಾ-ಲಿಂಗಸ್ಗೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸರ್ಕಾರ ಬಜೆಟ್ನಲ್ಲಿ ಅನುದಾನ ಪ್ರಕಟಿಸಿದ್ದು ಸಂತಸದ ವಿಚಾರವೇ ಆಗಿದೆ. ಆದರೆ ಈ ಮಾರ್ಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ನಿರ್ಮಿಸಿ, ನಿರ್ವಹಣೆಯ ನಂತರ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ಸರ್ಕಾರ ಮಾಡಿರುವುದು ಈ ರಸ್ತೆಯಲ್ಲಿ ಸಂಚರಿಸುವವರ ಜೇಬಿಗೆ ಕತ್ತರಿ ಬೀಳುವುದರಲ್ಲಿ ಸಂದೇಹವಿಲ್ಲ. ರಾಯಚೂರು ಸಮೀಪದಲ್ಲಿ ಉದ್ದೇಶಿತ ಯರಮರಸ್ ಮತ್ತು ಯದ್ಲಾಪುರ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕೇಂದ್ರದ ಪರಿಸರ ಮಂಡಳಿಯ ಸಮ್ಮತಿ ದೊರೆತಿಲ್ಲ. ಆದರೂ ಕಾಮಗಾರಿ ಜಾರಿಯಲ್ಲಿದ್ದು, ಮುಂದಿನ 2ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಳ್ಳುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಈಡೇರದ ಭರವಸೆ: ಜಿಲ್ಲೆಯಲ್ಲಿಯೇ ರಾಜ್ಯದ ಬೇಡಿಕೆಯ ಶೇ.40ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ, ಈ ಭಾಗಕ್ಕೆ ನಿರಂತರ ವಿದ್ಯುತ್ ಒದಗಿಸಬೇಕೆಂಬ ಬೇಡಿಕೆಗೆ ಸರ್ಕಾರ ನೀಡಿದ್ದ ಭರವಸೆ ಈಗಲೂ ಭರವಸೆಯಾಗೇ ಉಳಿಯಿತು. ಇನ್ನು ಜಿಲ್ಲೆಯ ಮೂಲಕ ಹಾದು ಹೋಗಲಿರುವ ರೈಲ್ವೆ ಯೋಜನೆಗಳಾದ ಮುನಿರಾಬಾದ್-ಮಹೆಬೂಬ್ ನಗರ ಉದ್ದೇಶಿತ ರೈಲು ಮಾರ್ಗದ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆಯೇ ಕುಂಟುತ್ತಾ ಸಾಗಿದ್ದು, ಅದಕ್ಕೆ ಸಂಬಂ ಧಿಸಿ ರಾಜ್ಯ ಸರ್ಕಾರ ವಿಶೇಷ ಕಾಳಜಿ ತೋರಿಲ್ಲ. ಹಾಗೆಯೇ ಕಳೆದ ರೇಲ್ವೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿರುವ ಗದಗ-ವಾಡಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯದ ಪಾಲಿನ ಶೇ.50ರಷ್ಟು ಮೊತ್ತದ ಬಿಡುಗಡೆಯ ಭಾಗ್ಯ ಈ ಬಾರಿ ಬಜೆಟ್ನಲ್ಲಿ ದೊರೆಯಲಿಲ್ಲ.
ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗೆ ರು. 2925 ಕೋಟಿ ನೀಡಿರುವುದು, ಹೈ.ಕ. ಅಭಿವೃದ್ಧಿ ಮಂಡಳಿಗೆ ರು. 232 ಕೋಟಿ ರು. ನಿಗದಿ ಮಾಡಿರುವುದು ಈ ಭಾಗದ ಜನರಿಗೆ ಯಾವ ರೀತಿಯಿಂದಲೂ ಪ್ರಯೋಜನವಾಗದು. ಈ ಎರಡೂ ನಿಗಮ ಮಂಡಳಿ ಜಿಲ್ಲೆ ಅಭಿವೃದ್ಧಿಗೆ ನೀಡಿದ ಕೊಡುಗೆ ಅಷ್ಟಕ್ಕಷ್ಟೇ ಎನ್ನಬಹುದು.
ಮಸ್ಕಿ ತಾಲೂಕು ಕೇಂದ್ರ: ಸಂಭ್ರಮಾಚರಣೆ
ಮಸ್ಕಿ: ರಾಜ್ಯದ ಸಿಎಂ ಜಗದೀಶ್ ಶೆಟ್ಟರ್ ಅವರು ಪ್ರಸಕ್ತ ಬಜೆಟ್ನಲ್ಲಿ ಮಸ್ಕಿ ತಾಲೂಕು ಕೇಂದ್ರ ಘೋಷಣೆ ಮಾಡುತ್ತಿದ್ದಂತೆಯೇ ಪಟ್ಟಣದಲ್ಲಿ ಶುಕ್ರವಾರ ಸಂಭ್ರಮಾಚರಿಸಲಾಯಿತು. ಮಸ್ಕಿ ತಾಲೂಕು ಹೋರಾಟ ಕ್ರಿಯಾ ಸಮಿತಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದರು. ಪಟ್ಟಣದ ಶಾಸಕರ ಕಚೇರಿ ಎದುರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಹಳೆ ಬಸ್ನಿಲ್ದಾಣ, ಕನಕ ವೃತ್ತ, ವಾಲ್ಮೀಕಿ ವೃತ್ತ, ದೈವದ ಕಟ್ಟೆ ಹತ್ತಿರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೈಕ್ ರ್ಯಾಲಿ: ನೂರಾರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸುವುದರ ಮೂಲಕ ಮಸ್ಕಿ ತಾಲೂಕು ಕೇಂದ್ರದ ಘೋಷಣೆ ಮಾಡಿದ್ದನ್ನು ಸ್ವಾಗತಿಸಿ ಬೈಕ್ ರ್ಯಾಲಿ ನಡೆಸಿದ ಯುವಕರು ಹಾಗೂ ತಾಲೂಕು ಸಮಿತಿ ಹೋರಾಟಗಾರರು ಸಿಎಂ ಶೆಟ್ಟರ್ ಹಾಗೂ ಶಾಸಕ ಪ್ರತಾಪಗೌಡ ಪಾಟೀಲ್ ಪರವಾಗಿ ಘೋಷಣೆ ಕೂಗಿದರು.