ಉದ್ಯೋಗ ಮೇಳ ರಾಜಕೀಯ ಗಿಮಿಕ್
ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ತಿಪ್ಪರಾಜು ನಡೆಸಿದ ಉದ್ಯೋಗ ಮೇಳವು ರಾಜಕೀಯ ಗಿಮಿಕ್ ಆಗಿದೆ. ಮೇಳದಲ್ಲಿ ಉದ್ಯೋಗ ಪಡೆದವರಿಗೆ ಯಾವುದೇ ಸೇವಾ ಭದ್ರತೆಯಿಲ್ಲ. ಆ ಮೂಲಕ ನಿರುದ್ಯೋಗಿಗಳನ್ನು ತಿಪ್ಪರಾಜು ವಂಚಿಸುವ ಕಾರ್ಯ ಮಾಡಿದ್ದಾರೆಂದು ರಾಜ್ಯ ವರ್ತೂರು ಪ್ರಕಾಶ್ ಯುವಸೇನೆಯ ಉಪಾಧ್ಯಕ್ಷ ನೀಲಕಂಠ ಬೇವಿನ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯರಮರಸ್ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ನಿರುದ್ಯೋಗಿ ಯುವಕರಿಗೆ ನಿರಾಸೆಯಾಗಿದೆ. ಮೇಳದಲ್ಲಿ ಪಾಲ್ಗೊಂಡ ಎಲ್ಲರಿಗೂ ಉದ್ಯೋಗ ದೊರೆತಿಲ್ಲ. 200 ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಕೇವಲ 30 ಕಂಪನಿಗಳು ಮಾತ್ರ ಭಾಗವಹಿಸಿರುವುದು ಉದ್ಯೋಗ ಮೇಳ ವಿಫಲವಾಗಿರುವುದನ್ನು ಸಾಬೀತು ಮಾಡಿದೆ ಎಂದು ಟೀಕಿಸಿದರು.
ರಾಜಕೀಯ ಲಾಭ: ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕರ ಆಪ್ತ ಸಹಾಯಕರಾಗಿದ್ದ ತಿಪ್ಪರಾಜು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲಿದ್ದು, ಅದೇ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆಯೇ ವಿನಾ ನಿರುದ್ಯೋಗಿ ಯುವಕರ ಪರ ನಿಜವಾದ ಕಾಳಜಿ ಅವರಿಗಿಲ್ಲ. ಉನ್ನತ ವ್ಯಾಸಂಗ ಮಾಡಿದವರಿಗೆ ಮೇಳದಲ್ಲಿ ಉದ್ಯೋಗ ನೀಡಿಲ್ಲ. ಬದಲಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಪಡೆದವರಿಗೆ ಮಾತ್ರ ಕಡಿಮೆ ವೇತನ ಉದ್ಯೋಗ ನೀಡಿದ್ದು, ಅವರಿಗೆ ಸೇವಾ ಭದ್ರತೆಯೂ ಇಲ್ಲವಾಗಿದೆ ಎಂದು ಆರೋಪಿಸಿದರು.
ಗಿಮಿಕ್: ಕಳೆದ ನಾಲ್ಕು ವರ್ಷಗಳಿಂದ ಶಿವನಗೌಡ ನಾಯಕರು ರಾಜ್ಯ ಸರ್ಕಾರದ ಭಾಗವಾಗಿದ್ದು ಸ್ವಕ್ಷೇತ್ರ ದೇವದುರ್ಗದಲ್ಲಿ ಇಂಥ ಉದ್ಯೋಗ ಮೇಳ ಆಯೋಜಿಸಿರಲಿಲ್ಲ. ಆದರೆ ಈಗ ಚುನಾವಣೆಯ ದೃಷ್ಟಿಯಿರಿಸಿಕೊಂಡು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಮತದಾರರನ್ನು ಓಲೈಸಲು ಇಂಥ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆಂದು ಟೀಕಿಸಿದರು.
ದೇವದುರ್ಗ ಕ್ಷೇತ್ರಕ್ಕೆ 2 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುವ ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ತಮ್ಮ ಕ್ಷೇತ್ರವನ್ನು ಎಷ್ಟರಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ದೇವದುರ್ಗಕ್ಕೆ ಗ್ರಾಮೀಣ ಭಾಗದಿಂದ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳು ಇಂದಿಗೂ ದುಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿಗೊಳಿಸಲು ಸಾಧ್ಯವಾಗದ ಅವರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯ ಮಾತನಾಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಲೇವಡಿ ಮಾಡಿದರು.
ಪೊಳ್ಳು ಭರವಸೆ: ರಾಯಚೂರು ಗ್ರಾಮೀಣ ಭಾಗದ ಮತದಾರರು ಬುದ್ಧಿವಂತರಾಗಿದ್ದಾರೆ. ಅವರು ಉದ್ಯೋಗ ಮೇಳ ಸೇರಿದಂತೆ ಮತ್ತಿತರ ಆಶ್ವಾಸನೆಗಳಿಗೆ ಮೋಸ ಹೋಗುವುದಿಲ್ಲ. ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ದೇವಾಲಯಗಳಿಗೆ, ಮಸೀದಿ, ಚರ್ಚ್ಗಳಿಗೆ ಅನುದಾನ ಒದಗಿಸಿ ಅಭಿವೃದ್ಧಿಗೊಳಿಸುವ ಪೊಳ್ಳು ಭರವಸೆ ನೀಡುವ ಮೂಲಕ ಮತದಾರರ ಓಲೈಕೆ ತೊಡಗಿದ್ದಾರೆಂದು ದೂರಿದರು.
ರಾಯಚೂರಿನ ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಿಗೆ ಮಂಜೂರಾಗಿದ್ದ ಸರ್ಕಾರಿ ವಸತಿ ಗೃಹದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕರ ಆಪ್ತ ಸಹಾಯಕ ತಿಪ್ಪರಾಜು ವಾಸವಾಗಿದ್ದು, ಅದೇ ಕಟ್ಟಡವನ್ನು ಚುನಾವಣೆ ಪ್ರಚಾರದ ಕಚೇರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ರಾಯಚೂರಿನ ಓಪೆಕ್ ಆಸ್ಪತ್ರೆ ಮುಚ್ಚಿ ಅನೇಕ ತಿಂಗಳು ಕಳೆದಿವೆ. ಆಸ್ಪತ್ರೆ ಪುನಾರಂಭಕ್ಕೆ ಗಮನಹರಿಸದ ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಗ್ರಾಮೀಣ ಭಾಗದಲ್ಲಿ ರಾಜಕೀಯ ತಂತ್ರಗಾರಿಕೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಹಿಂದುಳಿದ ಪ್ರದೇಶದ ಅಭಿವೃದ್ಧಿ ಮಾಡುವುದಾಗಿ ಆಶ್ವಾಸನೆ ನೀಡುತ್ತಲೇ ಕಾಲ ಕಳೆಯುತ್ತಿದ್ದಾರೆಂದು ದೂರಿದರು.
ಹೈ.ಕ.ಭಾಗದ ಬೃಹತ್ ಮತ್ತು ಅತ್ಯಾಧುನಿಕ ಸೌಲತ್ತುಗಳುಳ್ಳ ಆಸ್ಪತ್ರೆಯ ಪುನಾರಂಭಕ್ಕೆ ಪ್ರಯತ್ನಿಸದ ಶಿವನಗೌಡರು ಉದ್ಯೋಗ ಮೇಳದ ನೆಪದಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ತಿಪ್ಪರಾಜು ಅವರನ್ನು ಪ್ರಚಾರ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಬಾಬು, ಗುರುಸ್ವಾಮಿ, ಭೀಮಣ್ಣ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.