ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಭಿವೃದ್ಧಿ ನಾಸ್ತಿ, ಸ್ವಾರ್ಥ ರಾಜಕಾರಣ ಜಾಸ್ತಿ

Lingaraj Badiger
Updated On : 12 Feb 2013, 11:26 am

ರಾಯಚೂರು: ರಾಜ್ಯದ ಬಿಜೆಪಿ ನಾಯಕರು ಜನರ ಅಭಿವೃದ್ಧಿ ಮರೆತು ಸ್ವಾರ್ಥದಲ್ಲಿ ತೊಡಗಿದ್ದಾರೆ. ಸ್ವಾರ್ಥ ರಾಜಕಾರಣದಿಂದ ಬೇಸತ್ತು ಬಿಎಸ್ಸಾರ್ ಕಾಂಗ್ರೆಸ್‌ನತ್ತ ಒಲವು ತೋರಿದ್ದಾಗಿ ಬಳ್ಳಾರಿ ಸಂಸದೆ ಜೆ.ಶಾಂತಾ ಹೇಳಿದರು.
ಇಲ್ಲಿನ ಹೊರವಲಯದ ಏಳುಮೈಲ್ ಕ್ರಾಸ್ ಬಳಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ದೈಹಿಕವಾಗಿ ಬಿಜೆಪಿಯಲ್ಲಿದ್ದು ಮಾನಸಿಕವಾಗಿ ಈಗಾಗಲೇ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಸೇರಿದ್ದು, ಶೀಘ್ರದಲ್ಲಿಯೇ ಬಿಜೆಪಿಗೆ ರಾಜಿನಾಮೆ ನೀಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಪಾತ್ರ ದೊಡ್ಡದು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದ ನಂತರದಲ್ಲಿ ಆ ಪಕ್ಷದ ನಾಯಕರು ಈ ಇಬ್ಬರನ್ನು ಕಡೆಗಣಿಸಿ, ಸ್ವಾರ್ಥ ಸಾಧನೆಗೆ ಮುಂದಾಗಿದ್ದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯಿಲ್ಲವಾಗಿದೆ ಎಂದು ಆರೋಪಿಸಿದರು.
ಕಡೆಗಣಿಸಿದ್ದಕ್ಕೆ ದೂರವಾದೆವು: ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಪ್ರಾಮಾಣಿಕ ಹಾಗೂ ಅಭಿವೃದ್ಧಿ ಪರ ಚಿಂತನೆ ಹೊಂದಿದ್ದ ಶಾಸಕರನ್ನು ಕಡೆಗಣಿಸಲಾಯಿತು. ಆ ಮೂಲಕ ಅಧಿಕಾರದ ದುರುಪಯೋಗ ಮಾಡಿಕೊಳ್ಳಲಾಯಿತು. ಅದರಿಂದ ಬೇಸತ್ತು ತಾವು ಬಿಜೆಪಿಯಿಂದ ದೂರವುಳಿದಿದ್ದಾಗಿ ತಿಳಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಗಳು ಎಸ್ಸಿ ಮತ್ತು ಎಸ್ಟಿ ವಿರೋಧಿಯಾಗಿವೆ. ಈ ಜನಾಂಗಕ್ಕೆ ರೂಪಿಸಿದ ಯೋಜನೆಗಳ ಲಾಭ ಅರ್ಹರಿಗೆ ದೊರೆಯುತ್ತಿಲ್ಲ. ಈ ಯೋಜನೆಗಳ ದುರ್ಬಳಕೆಯಾಗುತ್ತಿದ್ದು, ಅದರಿಂದ ಎಸ್ಸಿ- ಎಸ್ಟಿ ಜನಾಂಗದವರು ಅಭಿವೃದ್ಧಿ ಹೊಂದುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಗೂ ಮುನ್ನವೇ ಈ ಜನಾಂಗದವರು ತಮ್ಮ ಭವಿಷ್ಯದ ಬಗ್ಗೆ ನಿರ್ಣಯಕ್ಕೆ ಬರಬೇಕಿದೆ ಎಂದು ಸಲಹೆ ನೀಡಿದರು.
ನಾಳೆ ಸಮಾವೇಶ: ಎಸ್ಸಿ- ಎಸ್ಟಿ ಜನಾಂಗದ ರಾಜ್ಯ ಮಟ್ಟದ ಸಮಾವೇಶ ಫೆ.13ರಂದು ಬೆ.11.30ಕ್ಕೆ ಏಳು ಮೈಲ್ ಕ್ರಾಸ್ ಬಳಿ ಆಯೋಜಿಸಿದ್ದು, ಬಿಎಸ್ಸಾರ್ ಕಾಂಗ್ರೆಸ್ ನಾಯಕ ಶ್ರೀರಾಮುಲು ಅವರು, ಎಸ್ಸಿ- ಎಸ್ಟಿ ಜನಾಂಗದವರಿಗೆ ಸಂಬಂಧಿಸಿದಂತೆ ಪಕ್ಷದ ನಿಲುವು ಪ್ರಕಟಿಸಲಿದ್ದಾರೆಂದು ಹೇಳಿದರು.
ರಾಜ್ಯ ಮಟ್ಟದ ಸಮಾವೇಶಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆಗಳು ಜಾರಿಯಲ್ಲಿದ್ದು, ನಾಲ್ಕೈದು ಲಕ್ಷ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗಾಗಿ ಊಟ, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಭವ್ಯ ವೇದಿಕೆಯ ನಿರ್ಮಾಣ ಮುಕ್ತಾಯ ಹಂತದಲ್ಲಿದೆ ಎಂದು ಹೇಳಿದರು.
ಸಮಾವೇಶಕ್ಕೆ ಪ್ರಮುಖರು: ಸಮಾವೇಶದಲ್ಲಿ ಡಾ. ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಹಾಗೂ ವೀರಮದಕರಿ ನಾಯಕನ ಸಂಬಂಧಿ ರಾಜಣ್ಣ ನಾಯಕ ಅವರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ನಾಯಕ ಶ್ರೀರಾಮುಲು ಸೇರಿದಂತೆ ಅನೇಕ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ತಾವು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಪಕ್ಷದ ನಾಯಕರು ಹಾಗೂ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದ ಅವರು, ಬಿಎಸ್ಸಾರ್ ಕಾಂಗ್ರೆಸ್‌ಗೆ ಇದುವರೆಗೆ 20 ಲಕ್ಷ ಜನ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಈ ವೇಳೆ ಪಕ್ಷದ ಪ್ರಮುಖರಾದ ಬಿ.ಶಿವಪ್ಪ, ಜಿಗಣಿ ಶಂಕರ್, ಖಲೀಲ್ ಅಹ್ಮದ್, ಅಂಬಿಕಾ ಜಾಲಗಾರ್, ದೇವೇಂದ್ರಪ್ಪ, ಮುರಳಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement