ಬಿಗಿ ಭದ್ರತೆ ನಡುವೆ ಕಾಲೇಜು ಕಟ್ಟಡ ಉದ್ಘಾಟನೆ
ಮುದಗಲ್: ಪಟ್ಟಣದಲ್ಲಿ ಶ್ರೀಮತಿ ಪದ್ಮಾವತಿಬಾಯಿ ರಾಘವೇಂದ್ರರಾವ್ ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಪೋಲೀಸರ ಸರ್ಪಗಾವಲಿನ ಮಧ್ಯೆ ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ಉದ್ಘಾಟಿಸಿದರು.
ವೈದ್ಯ ಡಾ. ಜಿ.ಆರ್. ದೇಶಪಾಂಡೆ ಯವರು 3 ಎಕರೆ ಭೂಮಿಯನ್ನು ದಾನ ನೀಡಲಾಗಿತ್ತು. ನಂತರ 1 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿತಗೊಂಡು ಉದ್ಘಾಟನೆಗೆ ಭೂ ದಾನಿಗಳಿಗೆ ಸ್ಥಾನಮಾನ ನೀಡಿಲ್ಲವೆಂದು ಗುಸು ಗುಸು ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ಸಿಬ್ಬಂದಿ ವರ್ಗಕ್ಕೆ, ಪಟ್ಟಣದ ಗಣ್ಯರಿಗೆ ಮಾತಿನ ಚಕಮಕಿ ಕೂಡ ನಡೆದಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ನೂತನ ಕಟ್ಟಡದ ಮುಂದೆ ಡಿವೈಎಸ್‌ಪಿ ಸೂರ್ಯವಂಶಿ ನೇತೃತ್ವದಲ್ಲಿ, ಇಬ್ಬರು ಸಿಪಿಐ, ಇಬ್ಬರು ಪಿಎಸ್‌ಐ, ಪೊಲೀಸ್ ಸಿಬ್ಬಂದಿ ಮತ್ತು 1 ಡಿಆರ್ ತುಕಡಿ ಒಳಗೊಂಡು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಏತನ್ಮಧ್ಯೆ ಭೂ ದಾನಿಗಳು ಅಸಮಾಧಾನಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಮಾನಪ್ಪ ವಜ್ಜಲರವರು ದೂರವಾಣಿ ಮೂಲಕ ಮಾತನಾಡಿ, ಸಂಧಾನಕಾರರಾಗಿ ಮತ್ತು ಆಹ್ವಾನಿತರನ್ನಾಗಿ ಕಾಲೇಜು ಪ್ರಾಚಾರ್ಯ ಬಸವರಾಜ ಮತ್ತು ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲರವರನ್ನು ಕಳಿಸಿ ಮಾತುಕತೆ ನಡೆಸಿ ಭೂದಾನಿ ಡಾ. ಜಿ.ಆರ್. ದೇಶಪಾಂಡೆ, ಸಹೋದರರು, ಕುಟುಂಬ ಪರಿವಾರದವನ್ನು ವೇದಿಕೆಗೆ ಬರುವಂತೆ ಮಾಡಿ ಅವರೆಲ್ಲರನ್ನೂ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ನಿನ್ನೆಯಿಂದ ಇದ್ದ ಉಹಾಪೋಹಕ್ಕೆ ತೆರೆ ಎಳೆದಂತಾಯಿತು.