ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶೀಘ್ರವೇ ಪ್ರಹ್ಲಾದ ಯುವಕ ಮಂಡಳ ಉದ್ಘಾಟನೆ

Lingaraj Badiger
Updated On : 12 Feb 2013, 11:22 am

ಸಿಂಧನೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಶಾಖಾ ಮಠ ಉದ್ಘಾಟನೆಯ ಜನರ ಬಹು ವರ್ಷಗಳ ಕನಸು ಟೀಕಾರಾಯರ ಆರಾಧನೆಯಂದು ನನಸಾಗಲಿದೆ ಎಂದು ಮಂತ್ರಾಲಯದ ರಾಯರ ಮಠದ ಹೆಚ್ಚುವರಿ ಕಾರ್ಯದರ್ಶಿ ಎಸ್.ಎಂ. ಸುಯಮೀಂದ್ರಾಚಾರ್ಯ ಭರವಸೆ ನೀಡಿದರು.
ಇಲ್ಲಿನ ಶ್ರೀರಾಮಮಂದಿರದ ಸಭಾಂಗಣದಲ್ಲಿ ಸೋಮವಾರ ಮಂತ್ರಾಲಯದ ರಾಯರ ಮಠದಿಂದ ಎಲ್ಲ ಕಡೆ ಆರಂಭಗೊಳ್ಳುತ್ತಿರುವ ಪ್ರಹ್ಲಾದ ಯುವಕ ಮಂಡಳದ ಸಿಂಧನೂರು ಶಾಖೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ರಾಯರಮಠದ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಇನ್ನು ಟೀಕಾರಾಯರ ಆರಾಧನೆಯ ಹೊತ್ತಿಗೆ ಪೂರ್ಣಗೊಳ್ಳಲಿದೆ. ಅಂದು ರಾಯರ ಮೃತಿಕಾ ಬೃಂದಾವನ ಪ್ರತಿಷ್ಠಾಪಿಸಿ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ಹೇಳಿದಾಗ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಸಾಮಾಜಿಕ ಕಾರ್ಯ: ಮಂತ್ರಾಲಯದ ರಾಯರು ಜಾತಿ- ಧರ್ಮಗಳನ್ನು ಮೀರಿದವರು. ಇಲ್ಲಿ ಸರ್ವ ಜನಾಂಗದ ಭಕ್ತರು ಬಂದು ಸೇವೆ ಸಲ್ಲಿಸಿ ರಾಯರ ಕೃಪಾಕಟಾಕ್ಷಕ್ಕೆ  ಪಾತ್ರರಾಗುತ್ತಾರೆ. ನಿತ್ಯ ಕನಿಷ್ಠ 50 ಸಾವಿರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 1 ಸಾವಿರಕ್ಕೂ ಹೆಚ್ಚು ಗೋವುಗಳು ಗೋ ಶಾಲೆಗಳಲ್ಲಿವೆ. ಪ್ರತಿ ವರ್ಷ 100 ಕ್ಕಿಂತ ಹೆಚ್ಚು ಕಸಾಯಿಖಾನೆಗೆ ಹೋಗುವ ಗೋವುಗಳನ್ನು ರಕ್ಷಣೆ ಮಾಡಲಾಗುತ್ತದೆ. ಅನೇಕ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲ ರಾಯರ ಸಾಮಾಜಿಕ ದೃಷ್ಟಿಕೋನಕ್ಕೆ ಪುಷ್ಟಿ ನೀಡುತ್ತಿವೆ.
ಪ್ರಹ್ಲಾದ ಯುವಕ ಮಂಡಳದ ಪ್ರಧಾನ ಸಂಚಾಲಕ ಉಡುಪಿ ಕೃಷ್ಣಾಚಾರ್ಯ ಭಗವದ್ಭಕ್ತ ಪ್ರಹ್ಲಾದರಾಯರು ರಾಯರ ಹಿಂದಿನ ಅವತಾರ. ಅವರ ಹೆಸರಿನಲ್ಲಿ ಆರಂಭಗೊಂಡಿರುವ ಈ ಯುವಕ ಮಂಡಳ ರಾಯರ ಸಾಮಾಜಿಕ ಪರಿವರ್ತನೆಯ ಕೂಸಾಗಿದೆ. ಮಾಧ್ವರ ವೈಚಾರಿಕ ಪ್ರಜ್ಞೆ ಜಾಗೃತಗೊಳ್ಳಬೇಕು. ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ಕುಡಿವ ನೀರಿನ ಅರವಟ್ಟಿಗೆಗಳ ಸ್ಥಾಪನೆ ಮತ್ತಿತರ ಸಾಮಾಜಿಕ ಕಾರ್ಯಗಳನ್ನು ಯುವಕ ಮಂಡಳ ಹಮ್ಮಿಕೊಳ್ಳಲು ಮುಂದಾಗಬೇಕು. ಇದು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ, ವಿವಿಧ ಮಠಾಧೀಶರನ್ನು ಒಳಗೊಂಡ ಸಂಸ್ಥೆಯಾಗಿದೆ ಎಂದರು. ಮಂತ್ರಾಲಯದ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಂಶುಪಾಲ ಡಾ. ಎನ್.ವಾದಿರಾಜಾಚಾರ್ಯ ಮಾತನಾಡಿ ಗುರುರಾಯರ ಪವಾಡಗಳು, ಯುವಕ ಮಂಡಳದ ಮಹತ್ವದ ಕುರಿತು ಉಪನ್ಯಾಸ ನಡಿದರು.
ಯುವಕ ಮಂಡಳದ ರಘುನಂದನಶರ್ಮ, ಶಾಸಕ ನಾಡಗೌಡ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಸಿಂಧನೂರು ಪ್ರಹ್ಲಾದ ಯುವಕ ಮಂಡಳಿಯ ಸಂಚಾಲಕ ರಾಮಕೃಷ್ಣಾಚಾರ್ಯ ಗೋನವಾರ, ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ, ರಾಯರ ಮಠದ ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಡಾ. ಆರ್.ವಿ. ಜೋಷಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಕೆ.ಗೋವಿಂದರಾವ್, ರಾಯರ ಮಠದ ಕಾರ್ಯದರ್ಶಿ ಎಂ.ಕೆ.ಗೌರಕರ್, ಸದಸ್ಯರಾದ ಜೆ.ಎಸ್. ದೇಶಪಾಂಡೆ, ವೆಂಕಣ್ಣ ಜೋಷಿ, ರಾಘವೇಂದ್ರರಾವ ಕುಲಕರ್ಣಿ, ವೆಂಕಟಗಿರಿದಾಸ, ಪ್ರಹ್ಲಾದ ಗುಡಿ, ಭೀಮಾಚಾರ್ಯ ನವಲಿ ಭಾಗವಹಿಸಿದ್ದರು.ಪ್ರಹ್ಲಾದ ಕೆಂಗಲ್ ಸ್ವಾಗತಿಸಿದರು. ಕೃಷ್ಣಮಲ್ಕ ಸಮುದ್ರ ಪ್ರಾರ್ಥಿಸಿದರು. ಲಕ್ಷ್ಮಣ ಕುಲಕರ್ಣಿ ನಿರೂಪಿಸಿದರು. ಸುಮಾರು 50ಕ್ಕೂ ಹೆಚ್ಚು ಜನ ಯುವಕ ಮಂಡಳದ ಸದಸ್ಯರಾಗಲು ಅರ್ಜಿ ಸಲ್ಲಿಸಿದರು. ಇವರಿಗೆ ಮಂತ್ರಾಲಯ ಮಠದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement