ಒಪೆಕ್: ಪ್ರಸ್ತಾವನೆಗೆ ಸ್ಪಂದಿಸದ ಸರ್ಕಾರ
ರಾಯಚೂರು: ರಾಜ್ಯ ಸರ್ಕಾರ ನಗರದ ಒಪೆಕ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಮುಂದುವರಿಸುವಂತೆ ನಡೆಸಿದ ಹೋರಾಟಕ್ಕೆ ವಿರುದ್ಧವಾಗಿ ಕೇವಲ 200 ಸಿಬ್ಬಂದಿಯ ಭರ್ತಿಗೆ ಆದೇಶಿಸಿದ್ದನ್ನು ಖಂಡಿಸಿ ಶೀಘ್ರದಲ್ಲಿಯೇ ಹೋರಾಟ ರೂಪಿಸಲಾಗುತ್ತದೆ. ಜತೆಗೆ ನ್ಯಾಯಾಲಯದಲ್ಲೂ ಈ ನಿಟ್ಟಿನಲ್ಲಿ ಆಗಿರುವ ಅನ್ಯಾಯ ಪ್ರಶ್ನಿಸಿ ದಾವೆ ಹೂಡುವುದಾಗಿ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೌಕರರ ಸಂಘ ಎಚ್ಚರಿಸಿದೆ.
ಈ ವಿಷಯವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ ತಿಳಿಸಿದರು. ರಾಜ್ಯ ಸರ್ಕಾರ ಕಳೆದ 7 ತಿಂಗಳ ಹಿಂದೆಯೇ ಈ ಆಸ್ಪತ್ರೆಯನ್ನು ಮುಚ್ಚಿದೆ. ಅಂದಿನಿಂದ ಜಿಲ್ಲಾದ್ಯಂತ ಅಷ್ಟೇ ಅಲ್ಲ ಇಡೀ ಹೈ.ಕ. ಭಾಗ ಮತ್ತು ನೆರೆಯ ಆಂಧ್ರದ ಕರ್ನೂಲು, ಗದ್ವಾಲ್ ಮತ್ತಿತರ ನಗರಗಳ ಜನತೆಗೂ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳು ದೊರೆಯದೇ ಪರದಾಡುವಂತಾಗಿದೆ ಎಂದು ದೂರಿದರು.
ಸರ್ಕಾರದ ಕ್ರಮ ಒಪ್ಪಂದಕ್ಕೆ ವಿರುದ್ಧ: ಇಂಥ ಪರಿಸ್ಥಿತಿಯಲ್ಲಿ ಆಸ್ಪತ್ರೆಯ ಪುನಾರಂಭ ಮತ್ತು 286 ಜನ ಸಿಬ್ಬಂದಿಯ ಮುಂದುವರಿಕೆಗೆ ಆಗ್ರಹಿಸಿ ಹೋರಾಟ ಸಮಿತಿಯಿಂದ 57 ದಿನಗಳ ಸತತ ಹೋರಾಟ ಮಾಡಲಾಗಿತ್ತು.
ಆ ವೇಳೆ ರಾಜ್ಯ ಸರ್ಕಾರ ಕಳೆದ ನವೆಂಬರ್‌ನಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ವಿರುದ್ಧವಾಗಿ ಕೇವಲ 200 ಸಿಬ್ಬಂದಿಯ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದು, ಈ ಮೊದಲು ಅಪೋಲೋ ಸಂಸ್ಥೆಯಲ್ಲಿ 11 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಆದ್ಯತೆ ನೀಡಿಕೆ ಬಗ್ಗೆ ಪ್ರಸ್ತಾಪಿಸದಿರುವುದು ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಒಪೆಕ್ ಆಸ್ಪತ್ರೆಗೆ ಸ್ವಾಯತ್ತತೆ ನೀಡಬೇಕೆಂಬ ಬೇಡಿಕೆಗೆ ಸರ್ಕಾರ ಬೆಲೆ ನೀಡದೇ ಮುಂದಿನ ದಿನಗಳಲ್ಲಿ ಎಂಸಿಐ ತಂಡವು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಲಿರುವುದರಿಂದ ಅಗತ್ಯ ಸಂಖ್ಯೆಯ ಬೋಧಕ ವರ್ಗದ ಕೊರತೆಯ ಬಗ್ಗೆ ಆಕ್ಷೇಪ ಎತ್ತದಿರುವಂತೆ ಮಾಡಲು ಸದ್ಯ ಒಪೆಕ್ ಆಸ್ಪತ್ರೆಯನ್ನು ರಿಮ್ಸ್ ಜತೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ ಎಂದು ದೂರಿದರು.
ಪ್ರಸ್ತಾವನೆಗೆ ಕ್ಯಾರೆ ಎನ್ನದ ಸರ್ಕಾರ: ರಿಮ್ಸ್‌ಗೆ ಒಪೆಕ್ ಸೇರ್ಪಡೆ ಮಾಡುವುದನ್ನು ಹೋರಾಟಗಾರರು ಮೊದಲಿನಿಂದಲೂ ವಿರೋಧಿಸಿದ್ದಾರೆ.
ಅದೇ ರೀತಿ ಆಸ್ಪತ್ರೆಯ ಪುನಾರಂಭಕ್ಕೆ ಅಗತ್ಯವಿರುವ 39 ಕೋಟಿ ಮತ್ತು 286 ಸಿಬ್ಬಂದಿ ನೇಮಕಾತಿಗೆ ಆಸ್ಪತ್ರೆಯ ವಿಶೇಷಾಧಿಕಾರಿ ಡಾ. ಶಂಕರ ಮಲ್ಪುರೆ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರ ಮಾತ್ರ ತನ್ನ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು.
ಸರ್ಕಾರ ಹೋರಾಟಗಾರರೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಮುರಿದು ತನ್ನದೇ ಧಾಟಿಯಲ್ಲಿ ನೇಮಕಾತಿಗೆ ಮುಂದಾಗಿರುವುದು ಹಾಗೂ ಇದುವರೆಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಯ ನೇಮಕಕ್ಕೆ ಆದ್ಯತೆ ನೀಡದಿರುವುದು ಕೈಗಾರಿಕೆ ವಿವಾದ ಕಾಯಿದೆ (ಎಸ್ 10) ಅಡಿಯ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಹೋರಾಟದ ರೂಪುರೇಷೆ
ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಆದೇಶ ವಿರೋಧಿಸಿ ಶೀಘ್ರದಲ್ಲಿಯೇ ಹೋರಾಟ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಫೆ.15 ಇಲ್ಲವೇ 16ರಂದು ನಗರದಲ್ಲಿ ವಿವಿಧ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಮಾನ ಮನಸ್ಕರ ಸಭೆಯನ್ನು ಕರೆದು ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟದ ರೂಪರೇಷೆ ಅಂತಿಮಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಅದೇ ರೀತಿ ಅಗತ್ಯ ದಾಖಲೆಗಳನ್ನು ಕಲೆ ಹಾಕಿ ನ್ಯಾಯಾಲಯದಲ್ಲಿಯೂ ದಾವೆ ಹೂಡಿ ಈ ಮೊದಲು ಕಾರ್ಯನಿರ್ವಹಿಸಿದ್ದ ಸಿಬ್ಬಂದಿಯ ನೇಮಕಾತಿಗೆ ಅವಕಾಶ ಕೋರಲಾಗುತ್ತದೆ ಎಂದು ತಿಳಿಸಿದರು. ಆಸ್ಪತ್ರೆಯ ನೌಕರರ ಸಂಘದ ಸಂಪತ್ ಕುಮಾರಿ, ಸಿಂಧೂ, ಮಲ್ಲೇಶ್, ವೀರಭದ್ರ ಮತ್ತಿತರರು ಇದ್ದರು.