ದಲಿತರ ಈ ಸ್ಥಿತಿಗೆ ರಾಷ್ಟ್ರೀಯ ಪಕ್ಷಗಳೇ ಕಾರಣ: ಅಂಬೇಡ್ಕರ್
ರಾಯಚೂರು: ದೇಶದಲ್ಲಿ ದಲಿತರ ಇಂದಿನ ದಯನೀಯ ಸ್ಥಿತಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ನಾಯಕರೇ ಕಾರಣ ಎಂದು ಅಂಬೇಡ್ಕರ್ ವಂಶಸ್ಥ ಆನಂದರಾಜ್ ಅಂಬೇಡ್ಕರ್ ಆರೋಪಿಸಿದರು.
ನಗರದ ಹೊರವಲಯದ ಏಳು ಮೈಲ್ ಕ್ರಾಸ್ ಬಳಿ ಬುಧವಾರ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮಾತ್ರ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದ್ದಾರೆ. ಇದು ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರು ಈ ದೇಶದ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಅವರನ್ನು ಎಲ್ಲ ಕ್ಷೇತ್ರಗಳಲ್ಲಿ ಕಡೆಗಣಿಸಲಾಗುತ್ತಿದೆ. ದಲಿತರು ಈಗಲಾದರೂ ಎಚ್ಚೆತ್ತುಕೊಂಡು ಜಾಗೃತರಾಗುವ ಮೂಲಕ ಮುಂದಿನ ದಿನಗಳಲ್ಲಿ ತಮಗೆ ಮೀಸಲಾದ ಸೌಲತ್ತುಗಳನ್ನು ಪಡೆಯುವತ್ತ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವಂತೆ ಮನವಿ ಮಾಡಿದರು.
ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಶೋಷಿತ ವರ್ಗದ ಹಿತಕಾಯಲು ಬಿಎಸ್ಸಾರ್ ಕಾಂಗ್ರೆಸ್ ಬದ್ಧವಾಗಿದೆ. ಶ್ರೀರಾಮುಲು ಮುಂದಿನ ಸಿಎಂ ಆಗಿ ಅಧಿಕಾರಕ್ಕೇರಿದಲ್ಲಿ ಎಸ್ಸಿ, ಎಸ್ಟಿಗಳಿಗೆ, ರೈತರಿಗೆ ಸಮಾಜದ ವಿವಿಧ ವರ್ಗಗಳಿಗೆ ಪ್ರತ್ಯೇಕ ಬಜೆಟ್ ಮಂಡಿಸಲಿದ್ದಾರೆಂದು ಹೇಳಿದರು.
ರಾಜ್ಯದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಎಸ್ಸಿ, ಎಸ್ಟಿ ಜನಾಂಗಕ್ಕೆ ಸೇರಿದ ನಾಯಕರಿಗೆ ಉತ್ತಮ ಖಾತೆಗಳನ್ನು ನೀಡದೇ ಕಾರ್ಯನಿರ್ವಹಿಸಲು ಅನುದಾನವಿಲ್ಲದಂಥ ಖಾತೆಗಳಿಗೆ ಸಚಿವರಾಗಿಸುವ ಮೂಲಕ ತುಳಿಯುವ ಕಾರ್ಯವನ್ನು ರಾಷ್ಟ್ರೀಯ ಪಕ್ಷಗಳು ಮಾಡಿವೆ ಎಂದು ಟೀಕಿಸಿದರು.
ವಿರೋಧ ಪಕ್ಷಗಳು ಬಿಎಸ್ಸಾರ್ ಪಕ್ಷ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿವೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವು ಬಹುತೇಕ ನಿಶ್ಚಿತ. ರಾಜ್ಯಾದ್ಯಂತ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಎಸ್ಸಿ, ಎಸ್ಟಿ ಜನಾಂಗದವರಿಗೆ ಅವರು ಮನವಿ ಮಾಡಿದರು.
ಪಕ್ಷದ ಕೋರ್ ಕಮಿಟಿ ಸದಸ್ಯ ರವೀಂದ್ರ ರೇಷ್ಮೆ ಮಾತನಾಡಿ, ಬಿಜೆಪಿ ಸರ್ಕಾರ ಸಂಘ ಪರಿವಾರವಾದ ಬೆಂಬಲಿಸಿದರೆ ಕಾಂಗ್ರೆಸ್ ಕುಟುಂಬ ರಾಜಕಾರಣ ವಾದಕ್ಕೆ ಜೋತುಬಿದ್ದಿದೆ. ಅದರಿಂದಾಗಿ ಶೋಷಿತ ವರ್ಗದ ಹಿತ ಕಾಯುವ ಪಕ್ಷಗಳೇ ಇಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಉದಯಿಸಿದೆ ಎಂದರು.
ರಾಜ್ಯವು ಜನಸಾಮಾನ್ಯರ ಗಣರಾಜ್ಯವಾಗಬೇಕೆ ವಿನಾ ರಾಷ್ಟ್ರೀಯ ಪಕ್ಷಗಳ ಕೈವಶದಲ್ಲಿರುವ ರಾಜಕೀಯ ರಾಜ್ಯವಾಗಬಾರದು ಎಂದು ಅವರು ಹೇಳಿದರು. ಸಂಸದರಾದ ಜೆ.ಶಾಂತಾ, ಸಣ್ಣಪಕೀರಪ್ಪ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಅನೇಕರು ಅಧಿಕಾರದಲ್ಲಿ ಬಂದಿದ್ದರೂ ಶೋಷಿತರ ಅಭಿವೃದ್ಧಿ ಇನ್ನೂ ಸಾಧ್ಯವಾಗಿಲ್ಲ. ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ದಲಿತರ ಕೂಗು ಕೇಳದು. ಹೀಗಾಗಿ ಶೋಷಿತರ ಸಮಸ್ಯೆಗಳಿಗೆ ಪರಿಹಾರವೇ ದೊರೆತಿಲ್ಲ ಎಂದು ಆರೋಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.