ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಂಜುಂಡಪ್ಪ ವರದಿ ಪ್ರಗತಿ ಮೌಲ್ಯಮಾಪನಕ್ಕೆ ಚಿಂತನೆ

Parashurama
Updated On : 15 Feb 2013, 11:26 am

ರಾಯಚೂರು: ಕಳೆದ ಆರು ವರ್ಷಗಳಲ್ಲಿ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯಿಂದ ಕೈಗೊಂಡ ವಿವಿಧ ಕಾಮಗಾರಿ, ಅನುದಾನ ಬಳಕೆ ಕುರಿತು ಸರ್ಕಾರದ ಅಂಗಸಂಸ್ಥೆ ಸೆಂಟರ್ ಫಾರ್ ಮಲ್ಟಿ ಡೆವಲೆಪಮೆಂಟ್‌ನ ತಂಡದಿಂದ ಮೌಲ್ಯಮಾಪನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಡಾ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ಹೇಳಿದರು.
ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 6 ವರ್ಷಗಳಲ್ಲಿ ಒಟ್ಟು 10524 ಕೋಟಿ ಸಮಿತಿಯಿಂದ ವೆಚ್ಚ ಮಾಡಲಾಗಿದೆ. ಕೈಗೊಂಡ ಕಾಮಗಾರಿಗಳಿಗೆ ಮಾಡಿದ ವೆಚ್ಚ, ಕಾಮಗಾರಿಯ ಭಾವಚಿತ್ರ ಸಹಿತ ಮಾಹಿತಿ ಕ್ರೂಢೀಕರಿಸಲು ಹಾಗೂ ಮೂರು ತಿಂಗಳಲ್ಲಿ ಮೌಲ್ಯಮಾಪನಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮೌಲ್ಯಮಾಪನ: ಮೌಲ್ಯಮಾಪನಾ ವರದಿಯಾಧರಿಸಿ ಅಭಿವೃದ್ಧಿಯಾಗಬೇಕಿರುವ ಮತ್ತಷ್ಟು ತಾಲೂಕುಗಳತ್ತ ಹೆಚ್ಚಿನ ಗಮನಹರಿಸಲಾಗುತ್ತದೆ. ಅಭಿವೃದ್ಧಿಯ ವಾಸ್ತವಾಂಶ, ಆರ್ಥಿಕ, ಭೌತಿಕ ಪ್ರಗತಿ ಸೇರಿದಂತೆ ಒಟ್ಟು 18ಅಂಶಗಳ ಆಧಾರದಲ್ಲಿ ಪ್ರಗತಿಯ ಒಟ್ಟಾರೆ ಮೌಲ್ಯಮಾಪನ ನಡೆಯಲಿದೆ ಎಂದು ತಿಳಿಸಿದರು.
ಸಮಿತಿಯ ವ್ಯಾಪ್ತಿಯ ಪ್ರದೇಶದಲ್ಲಿನ ಎಲ್ಲ ಇಲಾಖೆಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದ ಸಮಗ್ರ ಮಾಹಿತಿಯೊದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸಲು ಸಮಿತಿಯಿಂದ ನೀಡಿರುವ ಕಾರ್ಯಕ್ರಮಗಳ ಮಾಹಿತಿ ಕ್ರೂಢೀಕರಿಸಿ ಹೊತ್ತಿಗೆ ಪ್ರಕಟಿಸಲಾಗುತ್ತದೆ. ರಾಜ್ಯದ 27 ಜಿಲ್ಲೆಗಳಲ್ಲಿ ತಾವು ಈಗಾಗಲೇ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲಿಸಿದ್ದು, ಶೀಘ್ರದಲ್ಲಿಯೇ ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.
60ರಷ್ಟು ಪ್ರಗತಿ: ಎಲ್ಲ ಜಿಲ್ಲೆಗಳಲ್ಲಿಯೂ ಸಮಿತಿಯಿಂದ ನೀಡಿರುವ ಅನುದಾನದ ಬಳಕೆ ನಿಟ್ಟಿನಲ್ಲಿ ಸಮಿತಿಯಿಂದ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕಾಗಿ ಅಧಿಕಾರಿಗಳ ಸಮಿತಿ ರಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. 2012-13ನೇ ಸಾಲಿನಲ್ಲಿ ವಿಶೇಷಾಭಿವೃದ್ಧಿ ಅನುದಾನ 2680 ಕೋಟಿ ಪೈಕಿ 1603 ಕೋಟಿ ರು. ವೆಚ್ಚ ಮಾಡಲಾಗಿದೆ. ಶೇ.60ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ಅಧಿಕಾರ ವಹಿಸಿಕೊಂಡ ತಿಂಗಳಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಯೋಜನೆಗಳ ಜಾರಿ ನಿಟ್ಟಿನಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಬೆಂಗಳೂರಿನಲ್ಲಿ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು.
ಸರ್ಕಾರದ ಕೆಲ ಇಲಾಖೆಗಳಲ್ಲಿ ಸಮರ್ಪಕವಾಗಿ ಅನುದಾನ ಬಳಕೆಯಾಗಿದೆ. ಕುಡಿವ ನೀರಿನ ಯೋಜನೆಗಳು, ಭೂ ಚೇತನ, ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಬಳಕೆಯಾಗಿದೆ. ಅನುದಾನ ಬಳಕೆ ಮಾಡಿಕೊಳ್ಳದ ಇಲಾಖೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಡಿಸಿ ಮಂಜುಶ್ರೀ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments