ಮಸ್ಕಿ ತಾಲೂಕು ಕೇಂದ್ರ:ಎಲ್ಲರ ಹೋರಾಟ ಕಾರಣ
ಮಸ್ಕಿ: ಪಟ್ಟಣ ತಾಲೂಕಾಗಿ ಘೋಷಣೆಯಾಗಲು ಶಾಸಕ ಪ್ರತಾಪಗೌಡ ಪಾಟೀಲರೊಬ್ಬರೇ ಶ್ರಮಿಸಿಲ್ಲ. ಸಮಸ್ತ ನಾಗರಿಕರ ದಶಕದ ಹೋರಾಟದ ಫಲವಾಗಿ ತಾಲೂಕು ಕೇಂದ್ರದ ಬೇಡಿಕೆ ಈಡೇರಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕೆಜೆಪಿ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ್ ಆನ್ವರಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಎಂದು ಘೋಷಿಸಿದರೆ ಸಾಲದು, ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದ ಅವರು, ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ತಮ್ಮನ್ನು ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದಾರೆಂದು ತಿಳಿಸಿದರು. ಸಿಂಧನೂರಿನಿಂದ ಕೆಜೆಪಿ ಅಭ್ಯರ್ಥಿಯಾಗಿ ರಾಜಶೇಖರ ಪಾಟೀಲ್ ಹಾಗೂ ಲಿಂಗಸ್ಗೂರಿಂದ ಎಚ್.ಬಿ. ಮುರಾರಿ ಅವರ ಹೆಸರು ಅಂತಿಮಗೊಳಿಸಲಾಗಿದೆ. ಮಸ್ಕಿ ಕ್ಷೇತ್ರಕ್ಕೆ ಮೂವರ ಹೆಸರು ಕೇಳಿಬರುತ್ತಿದೆ ಎಂದರು. ಜಿಲ್ಲಾ ಸಂಚಾಲಕ ವೆಂಕನಗೌಡ ಮಲ್ಕಾಪುರ, ಮಸ್ಕಿ ಸಂಚಾಲಕ ಬಸಣ್ಣ ತೊಂತನಾಳ, ರುದ್ರಗೌಡ ಪಗಡದಿನ್ನಿ ಮತ್ತಿತರರಿದ್ದರು.
ಮಾ.9ರಂದು ಜಿಲ್ಲಾ ಸಮಾವೇಶ
ರಾಯಚೂರು: ನಗರದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾ ಕಾರ್ಯಕಾರಿಣಿ ಸಭೆಯು ಇತ್ತೀಚೆಗೆ ಸರ್ಕಾರಿ ನೌಕರರ ಸ್ಪಂದನಾ ಸಭಾಭವನದಲ್ಲಿ ಕರೆದು ಮಾ.9ರಂದು ಜಿಲ್ಲಾ ಛಲವಾದಿ ಮಹಾಸಭಾದ ಪ್ರಥಮ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಯಿತು. ಛಲವಾದಿ ಮಹಾಸಭಾದ ಅಧ್ಯಕ್ಷ ಜಗನ್ನಾಥ ಸುಂಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾ.9ರಂದು ಜಿಲ್ಲಾ ಮಟ್ಟದ ಸಮಾವೇಶವನ್ನು ಆಯೋಜಿಸುವುದು, ಸಮಾವೇಶದ ಉದ್ಘಾಟನೆಗೆ ಸಿಎಂ ಜಗದೀಶ ಶೆಟ್ಟರ್ ಅವರನ್ನು ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.