ಟಿಕೆಟ್ ನೀಡಿಕೆ; ಅಸಮಾಧಾನ ಬೇಡ
ಲಿಂಗಸ್ಗೂರು: ತಾಲೂಕಿನಲ್ಲಿ ಇದುವರೆಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದ್ದು, ಮಾ.7ರಂದು ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷನಿಷ್ಠ ಮುಖಂಡರು ಹಾಗೂ ಕಾರ್ಯಕರ್ತರನ್ನು ಗುರ್ತಿಸಿ ಸೂಕ್ತ ಸ್ಥಾನಮಾನ ಕಲ್ಪಿಸುತ್ತಾ ಬಂದಿದೆ ಎಂದರು.
ಗೆಲವಿಗೆ ಶ್ರಮಿಸಿ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಜಿಪಂ ಶಿಕ್ಷಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪನಗೌಡ ಕರಡಕಲ್ ಮಾತನಾಡಿ, ಬಿಜೆಪಿ ಸರ್ಕಾರ ಗೊಂದಲದ ರಾಜ ಕಾರಣದಿಂದ ಜನತೆ ಬೇಸತ್ತಿದ್ದಾರೆ. ಈ ಬಾರಿ ಪಕ್ಷಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಪಕ್ಷದಿಂದ ಸ್ಪರ್ಧಿಸಲು ಎಲ್ಲ ಸಮುದಾಯದ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು. ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಲಾಲ್ ಅಹ್ಮದಸಾಬ್, ಶರಣಬಸಪ್ಪ ಗುಡದನಾಳ, ಗುರುಪಾದಪ್ಪ ಹೊನ್ನಳ್ಳಿ, ಗುಂಡಪ್ಪ ನಾಯಕ, ಬಸವಂತರಾಯ ಕುರಿ, ಟಿ.ಆರ್.ನಾಯಕ, ಮಲ್ಲಣ್ಣ ವಾರದ, ಖಾದರ ಪಾಷಾ, ಕುಮಾರಸ್ವಾಮಿ ಸಾಲ್ಮನಿ, ಅನೀಸ್ ಪಾಶಾ, ಬಸನಗೌಡ ಚಿತಾಪೂರ, ಎಂ.ಡಿ.ಸಾದಿಕ್ ಅಲಿ, ಗುರುಬಸಪ್ಪ ಸಜ್ಜನ, ಬಸಣ್ಣ ಮೇಟಿ, ಬಸವರಾಜ ಗುತ್ತೇದಾರ, ಶರಣಯ್ಯ ಗೊರೇಬಾಳ, ಚನ್ನಾರಡ್ಡಿ ಬಿರಾದಾರ ಮತ್ತಿತರರಿದ್ದರು.