ಆಶಾ ಕಾರ್ಯಕರ್ತೆಯರಿಂದ ಮನವಿ
ಸಿಂಧನೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಎರಡು ದಿನಗಳ ಮುಷ್ಕರ ಹಿನ್ನೆಲೆಯಲ್ಲಿ ಎನ್‌ಆರ್‌ಎಚ್‌ಎಂ ಆರೋಗ್ಯ ಇಲಾಖೆಯಡಿಯ ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ ಸಾರ್ವತ್ರಿಕ ಮುಷ್ಕರ ಪಾಲ್ಗೊಳ್ಳಲಾಗುತ್ತೇವೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಬೇಕೆಂದು ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಸಕಾಲಕ್ಕೆ ರೋಗಿಗಳನ್ನು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ದು ಸಹಸ್ರಾರು ಗ್ರಾಮೀಣ ಬಡಜನರು, ಬಾಣಂತಿ ಮತ್ತು ನವಜಾತ ಶಿಶುಗಳ ಜೀವ ಉಳಿಸುತ್ತಿದ್ದಾರೆ.ಅಂತೆಯೇ ಶಿಶು ಮತ್ತು ಬಾಣಂತಿ ಮರಣ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದರು.
ಮಾರಣಾಂತಿಕ ಕಾಯಿಲೆಗೆ ತುತ್ತಾದವರಿಗೆ ಸರ್ಕಾರದಿಂದ ಸಂಪೂರ್ಣ ಉಚಿತ ಚಿಕಿತ್ಸೆ, ಆರ್ಥಿಕ ನೆರವು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು, ಜೀವವಿಮೆ ಮತ್ತು ಅವರ ಕುಟುಂಬಕ್ಕೆ ವಾಜಪೇಯಿ ಆರೋಗ್ಯಶ್ರೀ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತೆಯರ ತಾಲೂಕು ಸಮಿತಿ ಅಧ್ಯಕ್ಷೆ ಜಯಶ್ರೀ ಕಣ್ಣೂರು, ಕಾರ್ಯಕರ್ತೆಯರ ಸಂಘದ ಪರವಾಗಿ ಚನ್ನಬಸವ ಜಾನೇಕಲ್, ವಿರುಪಾಕ್ಷಮ್ಮ, ಪಾರ್ವತಿ, ಸುಮಾ, ಶಶಿಕಲಾ, ರೇಣುಕಾ, ಭೀಮರಾಯ ವಕೀಲರು, ಮಂಜುಳಾ ಸೇರಿದಂತೆ ಅನೇಕರು ಇದ್ದರು.