ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಸುಕಾಗಿತ್ತು ಕಾರ್ಮಿಕ ಸಂಘಟನೆಗಳ ಮುಷ್ಕರ

Mainashree
Updated On : 21 Feb 2013, 11:00 am

ಸಾರಿಗೆ ಸಂಚಾರ ಸ್ಥಗಿತ, ಶಾಲಾ- ಕಾಲೇಜು, ಬಿಸ್ಸೆನ್ನೆಲ್, ಅಂಚೆ ಕಚೇರಿ, ಬ್ಯಾಂಕ್ ರಜೆ
ಲಿಂಗಸ್ಗೂರು: ದೇಶದ ಕಾರ್ಮಿಕ ಸಂಘಟನೆಗಳು ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ದೇಶವ್ಯಾಪಿ ಎರಡು ದಿನಗಳ ಐಕ್ಯ ಮುಷ್ಕರ ನಡೆಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಲಿಂಗಸ್ಗೂರು ಪಟ್ಟಣದಲ್ಲಿ ಬುಧವಾರ ಹಲವು ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮುಷ್ಕರ ನಡೆಸಿದರು.
ಪಟ್ಟಣದ ಗುರುಭವನದ ಆವರಣದಲ್ಲಿ ಜಮಾಯಿಸಿದ ಅಂಗನವಾಡಿ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ಜನವಾದಿ ಮಹಿಳಾ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಪಂ ನೌಕರರ ಸಂಘ, ಎಸ್‌ಎಫ್‌ಐ, ಸಿಐಟಿಯು, ಎಐಟಿಯುಸಿ, ಯುಟಿಯುಎಲ್‌ಎಸ್, ಹಮಾಲಿ ಕಾರ್ಮಿಕರ ಸಂಘಗಳ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಕಾರ್ಯಕರ್ತೆಯರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣೆಗೆಯೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು. ಅದರಂತೆ ಬಿಎಸ್ಸೆನ್ನೆಲ್, ಅಂಚೆ ಇಲಾಖೆ, ಬ್ಯಾಂಕುಗಳ ಅಧಿಕಾರಿಗಳು ಮತ್ತು ನೌಕರರು ಕಚೇರಿ ಮುಂದೆ ಮುಷ್ಕರ ನಡೆಸಿದರು.
ಸಾರಿಗೆ ಸಂಚಾರ ಬಂದ್: ದೇಶವ್ಯಾಪಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಮುಷ್ಕರ ಕರೆದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಪೆಟ್ರೋಲ್ ಬಂಕ್‌ಗಳು ಹಾಗೂ ವ್ಯಾಪಾರ ವಹಿವಾಟು, ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಆರಂಭಗೊಂಡಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸರ್ಕಾರದ ನೀತಿಗಳು ಒಂದೆಡೆ ಅಪಾರ ಸಂಪತ್ತಿನ ಒಡೆಯರ ಬೆಳವಣಿಗೆ ಮತ್ತೊಂದೆಡೆ ಸಂಪತ್ತಿನ ಸೃಷ್ಟಿಕರ್ತರಿಗೇ ಬಡತನ ಸೃಷ್ಟಿಸಿದೆ. ಅಗತ್ಯ ವಸ್ತುಗಳ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ 4 ಕೋಟಿಗೂ ಅಧಿಕ ಚಿಲ್ಲರೆ ವ್ಯಾಪಾರಿ ಕುಟುಂಬಗಳು ಉಪಜೀವನ ಕಳೆದುಕೊಂಡು ನಿರುದ್ಯೋಗಿಗಳಾಗುವ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕ ವಲಯದ ವಿಮೆ, ಬ್ಯಾಂಕ್ ಹಣಕಾಸು ಸಂಸ್ಥೆಗಳನ್ನು ದುರ್ಬಲಗೊಳಿಸುವ ಕ್ರಮ ದೇಶದ ಹಿತಕ್ಕೆ ಮಾರಕವಾದ ಕ್ರಮವಾಗಿವೆ ಎಂದು ದೂರಿದರು.
ತೀವ್ರ ಶೋಷಣೆ: ಉದ್ಯೋಗರಹಿತ ಬೆಳವಣಿಗೆಯಿಂದಾಗಿ ಕಾಯಂ ಕೆಲಸಗಳು ಇಲ್ಲವಾಗಿ ಗುತ್ತಿಗೆ ಕಾರ್ಮಿಕ ಪದ್ಧತಿಯಲ್ಲಿ ನಿರ್ವಹಿಸುವ ಮೂಲಕ ತೀವ್ರ ಶೋಷಣೆಗೀಡು ಮಾಡಲಾಗುತ್ತಿದೆ. ಸರ್ಕಾರ ಮತ್ತು ಖಾಸಗಿ ರಂಗದ ಕೈಗಾರಿಕೆ ಮತ್ತು ಇತರೆ ವಲಯಗಳಲ್ಲಿ ಗುತ್ತಿಗೆ, ತಾತ್ಕಾಲಿಕ, ಗೌರವಧನ, ಪ್ರೋತ್ಸಾಹ ಧನದ ಹೆಸರಿನಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ಸೇವಾ ನಿಯಮಗಳನ್ನು ಜಾರಿಗೊಳಿಸುತ್ತಿಲ್ಲ. ಕನಿಷ್ಠ ವೇತನ, ಭವಿಷ್ಯನಿಧಿ, ಗ್ರಾಚ್ಯುಟಿ, ಬೋನಸ್, ಇಎಸ್‌ಐ ಸೌಲಭ್ಯಗಳನ್ನು ಜಾರಿಗೊಳಿಸದೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು.
ಬೇಡಿಕೆಗಳು: ಬೆಲೆ ಏರಿಕೆ ನಿಯಂತ್ರಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಎಲ್ಲ ಜನರಿಗೆ ಅಗತ್ಯ ಆಹಾರಧಾನ್ಯ ರಿಯಾಯಿತಿ ದರದಲ್ಲಿ ವಿತರಿಸಬೇಕು. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು. ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸಬೇಕು. ಬೋನಸ್, ಭವಿಷ್ಯನಿಧಿಗೆ ಇರುವ ಮಿತಿ ತೆಗೆಯಬೇಕು. ಗ್ರಾಚ್ಯುಟಿ ಹೆಚ್ಚಳ, ನಿಶ್ಚಿತ ಪಿಂಚಣಿ, ಬಾಕಿ ಇರುವ ವೇತನ ಪರಿಷ್ಕರಣೆ ನೀಡಬೇಕು. ಕಾಯಂ, ಸರ್ವಕಾಲಿಕ ಕೆಲಸಗಳನ್ನು ಗುತ್ತಿಗೆ ನೀಡುವುದನ್ನು ನಿಲ್ಲಿಸಿ ಗುತ್ತಿಗೆ ನೌಕರರಿಗೆ ಕಾಯಂ ನೌಕರರಿಗೆ ನೀಡುವ ಸಂಬಳ ಸೌಲಭ್ಯ ನೀಡಬೇಕು. ಕನಿಷ್ಠ ವೇತನ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಹಕ ಸೂಚ್ಯಾಂಕಕ್ಕೆ ಅನುಗುಣವಾಗಿ 10 ಸಾವಿರ ಕನಿಷ್ಠ ನೇತನ ನಿಗದಿ ಮಾಡಬೇಕು.
ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆತ ಕೈಬಿಟ್ಟು ಬಲಪಡಿಸಬೇಕು. ಕಾರ್ಮಿಕ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಅವುಗಳ ಉಲ್ಲಂಘನೆಗೆ ದಂಡನೆ ಶಿಕ್ಷೆ ವಿಧಿಸಬೇಕು. ಜಿಲ್ಲೆಯ ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಿದ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡಿ ಶೇರುದಾರರೆಂದು ಪರಿಗಣಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಸಾಮಗ್ರಿಗಳ ಗುಣಮಟ್ಟ ಹಾಗೂ ಪ್ರಮಾಣ ಕಡಿಮೆಯಾಗದಂತೆ ಕ್ರಮ ಜರುಗಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ಕೂಲಿ ಹೆಚ್ಚಳ ಮಾಡಬೇಕು. ಎಲ್ಲ ಹಮಾಲಿ ಕಾರ್ಮಿಕರಿಗೆ ಖಾತ್ರಿಯಾದ ಪಿಂಚಣಿ ಜಾರಿಯಾಗಬೇಕು. ಎಪಿಎಂಸಿಗಳಲ್ಲಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿ ಹಮಾಲಿ ಕಾರ್ಮಿಕರಿಗೆ 2 ನಿರ್ದೇಶಕ ಸ್ಥಾನ, 2 ಜೊತೆ ಸಮವಸ್ತ್ರ ನೀಡಬೇಕೆಂಬ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತ್ಯೇಕ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮುಷ್ಕರದಲ್ಲಿ ಬಿಎಸ್ಸೆನ್ನೆಲ್ ಇಲಾಖೆಯ ಸೋಮನಮರಡಿ, ಮಲ್ಲಿಕಾರ್ಜುನ ಹಿರೇಮಠ, ಸಿ.ಆರ್. ಹಿರೇಮಠ, ದೇವೇಂದ್ರಪ್ಪ, ಕಮಲಮ್ಮ, ಮಲ್ಲಮ್ಮ, ಬ್ಯಾಂಕ್ ಅಧಿಕಾರಿಗಳಾದ ಚನ್ನಪ್ಪ ಮೇಣದಾಳ, ಜಗನ್ನಾಥ, ಪದ್ಮನಾಭ ನಾಯಕ, ಭೋಜಣ್ಣ, ಸಿಐಟಿಯು ಮುಖಂಡ ಶೇಕ್ಷಾಖಾದ್ರಿ, ಅಂಗನವಾಡಿ ಸಂಘದ ಶಿವಗಂಗಮ್ಮ, ಸರಸ್ವತಿ ಈಚನಾಳ, ಅಕ್ಷರ ದಾಸೋಹ ಬಿಸಿಯೂಟ ಸಂಘದ ಮಲ್ಲಮ್ಮ ಮಸ್ಕಿ, ಯಲ್ಲಮ್ಮ ಮುದಗಲ್, ಯಂಕೋಬ, ಅನ್ನಪೂರ್ಣ, ಆಶಾ ಕಾರ್ಯಕರ್ತೆಯರ ಸಂಘದ ಲವಿನಾ ಹಟ್ಟಿ, ಎಸ್‌ಎಫ್‌ಐನ ರಂಗನಾಥ, ಪ್ರಶಾಂತ, ಮಹೇಶ, ಸರಸ್ವತಿ, ಪಾರ್ವತಿ, ಲಿಂಗಯ್ಯ, ಹಮಾಲರ ಸಂಘದ ಮಹಾಂತೇಶ, ಕೆ.ಎಸ್. ಶಿವಾನಂದ, ಪರಸಪ್ಪ, ಕೀರಪ್ಪ, ಗುಂಡಪ್ಪ, ಮಲ್ಲಪ್ಪ ವಗ್ಗರ ಸೇರಿದಂತೆ ಸಿಐಟಿಯು, ಅಐಟಿಯುಸಿ, ಯುಟಿಯುಎಲ್‌ಎಸ್, ಬಿಸಿಯೂಟ, ಅಂಗನವಾಡಿ, ಆಶಾ, ಹಮಾಲರ ಸಂಘ, ಎಸ್‌ಎಫ್‌ಐ, ಜನವಾದಿ ಮಹಿಳಾ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಪಂ ನೌಕರರ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement