ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಿಶ್ರ ಪ್ರತಿಕ್ರಿಯೆ

Mainashree
Updated On : 21 Feb 2013, 10:59 am

ರಾಯಚೂರು: ಬೆಲೆಯೇರಿಕೆ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರದಿಂದ ಆರಂಭಗೊಂಡ ಕಾರ್ಮಿಕರ ದೇಶವ್ಯಾಪಿ ಮುಷ್ಕರಕ್ಕೆ ಮೊದಲ ದಿನ ರಾಯಚೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ಕೆಲವೆಡೆ ಬಂದ್ ಯಶಸ್ವಿಯಾಯಿತು. ಮತ್ತೆ ಕೆಲವೆಡೆ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.
ನಗರದಲ್ಲಿ ಬೆಳಗ್ಗೆ ಬಸ್ ಸಂಚಾರ ಎಂದಿನಂತೆಯೇ ಆರಂಭಗೊಂಡಿತು. ಆನಂತರದಲ್ಲಿ ಸುರಕ್ಷತಾ ದೃಷ್ಟಿಯಿಂದ ಸ್ಥಗಿತಗೊಳಿಸಲಾಯಿತು. ಆದರೆ ರಸ್ತೆಯಲ್ಲಿ ವಾಹನಗಳು, ಆಟೋಗಳ ಸಂಚಾರ ಎಂದಿನಂತಿತ್ತು. ಶಾಲಾ-ಕಾಲೇಜುಗಳಿಗೆ ಮುಂಜಾಗ್ರತೆ ಕ್ರಮವಾಗಿ ರಜೆ ಘೋಷಿಸಲಾಗಿತ್ತು.
ರೈತರ ಪರದಾಟ: ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು, ಬ್ಯಾಂಕ್‌ಗಳು, ಜೀವ ವಿಮಾ ನಿಗಮದ ಕಚೇರಿ, ಅಂಚೆ ಕಚೇರಿ, ಎಪಿಎಂಸಿ ಕಾರ್ಮಿಕರು ಮುಷ್ಕರಕ್ಕೆ ಬೆಂಬಲಿಸಿ ಕೆಲಸದಿಂದ ದೂರ ಉಳಿದಿದ್ದರು. ನಗರದ ಸರಾಫ್ ಬಜಾರ್‌ನಲ್ಲಿ ಚಿನ್ನದ ವಹಿವಾಟು ನಡೆಯಲಿಲ್ಲ. ಎಪಿಎಂಸಿ ಹಮಾಲರ ಸಂಘವು ಕಾರ್ಮಿಕರನ್ನು ಬೆಂಬಲಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಅಲ್ಲಿಯೂ ವಹಿವಾಟು ನಡೆಯದೇ ರೈತರು ಪರದಾಡಿದರು.
ಇನ್ನು ನಗರದಲ್ಲಿ ಅಂಚೆ ಕಚೇರಿ, ಬ್ಯಾಂಕುಗಳು, ಜೀವಿ ವಿಮಾ ನಿಗಮದ ವಿಭಾಗೀಯ ಕಚೇರಿಗಳ ಸಿಬ್ಬಂದಿ ಸಹ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಕಚೇರಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು. ಈ ವೇಳೆ ಎಲ್‌ಐಸಿ ನೌಕರರು ಕಚೇರಿ ಎದುರು, ಅಂಚೆ ನೌಕರರು ಕಚೇರಿ ಮುಂದೆ ದಿನವಿಡೀ ಧರಣಿ ನಡೆಸಿದರು.
ಸಿಡಿಪಿಒ ಎದುರು ಧರಣಿ: ಈ ಮಧ್ಯೆ ನಗರದಲ್ಲಿ ಅಂಗನವಾಡಿ ನೌಕರರ ಸಂಘದವರು ಸಿಡಿಪಿಒ ಕಚೇರಿ ಎದುರು ಧರಣಿ ನಡೆಸಿ, ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಣ, ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸುವುದು ಸೇರಿದಂತೆ ಅಂಗನವಾಡಿ ನೌಕರರ ಬೇಡಿಕೆಗಳಾದ ಕನಿಷ್ಠ ವೇತನ 10 ಸಾವಿರ ನಿಗದಿ ಮಾಡಲು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳ ಖಾಸಗೀಕರಣ, ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರವೂ ಪೂರ್ಣ ಪ್ರಮಾಣದ ವೇತನ ನೀಡುವುದು, ಅಂಗನವಾಡಿ ಕೇಂದ್ರಗಳ ಬಾಡಿಗೆ ಹೆಚ್ಚಳ, ಸೌದೆಗೆ ನೀಡುವ ಅನುದಾನದ ಹೆಚ್ಚಳ, ನೌಕರರು ಸೇವಾವಧಿಯಲ್ಲಿ ಮರಣ ಹೊಂದಿದರೆ ಅಂಥವರ ಕುಟುಂಬದವರಿಗೆ ನೌಕರಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಚ್. ಪದ್ಮಾ, ಕಾರ್ಯದರ್ಶಿ ಸಂಧ್ಯಾ, ಮಲ್ಲಿಕಾ, ಫರೀದಾ, ವರಲಕ್ಷ್ಮಿ, ಗೌರಮ್ಮ, ಆದಿಲಕ್ಷ್ಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಎಐಯುಟಿಯುಸಿ ರ್ಯಾಲಿ: ನಗರದಲ್ಲಿ ಬುಧವಾರ ಕಾರ್ಮಿಕರು ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರ ಬೆಂಬಲಿಸಿ ಎಐಯುಟಿಯುಸಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ನಗರದ ಭಗತ್‌ಸಿಂಗ್ ವೃತ್ತದಿಂದ ಆರೋಗ್ಯ ಇಲಾಖೆಯವರೆಗೆ ಸಂಘಟನೆಯ ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷ ಮಹೇಶ್ ಚೀಕಲಪರ್ವಿ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಅದರಿಂದಾಗಿ ಬಡವರು ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ ನೌಕರರ ಸೇವೆಯನ್ನು ಕಾಯಂ ನೇಮಕಾತಿ ಮಾಡಬೇಕು. ಪ್ರೋತ್ಸಾಹ ಧನ, ಗೌರವಧನ ಹೆಚ್ಚಿಸಬೇಕು, ಕನಿಷ್ಠ ವೇತನ 10 ಸಾವಿರ ನಿಗದಿ ಮಾಡಬೇಕು, ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಮಣ್ಣ ಎಂ., ಎಐಎಂಎಸ್‌ಎಸ್ ಸಂಘಟನೆಯ ಚೇತನಾ ಬನಾರೆ, ಜಯಶ್ರೀ, ಲಕ್ಷ್ಮಿ, ಕವಿತಾ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗಂಜ್ ಹಮಾಲರ ಸಂಘ: ನಗರದ ಎಪಿಎಂಸಿ ಗಂಜ್ ಹಮಾಲರ ಸಂಘದಿಂದ ಎಪಿಎಂಸಿ ಎದುರು ಧರಣಿ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆಯೇರಿಕೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯ ನೇತೃತ್ವವನ್ನು ಸಂಘದ ಗೌರವಾಧ್ಯಕ್ಷ ವೀರಭದ್ರ ವಹಿಸಿದ್ದರು. ಹಮಾಲರು ಪಾಲ್ಗೊಂಡಿದ್ದರು.
ಜಿಲ್ಲೆಯ ದೇವದುರ್ಗ ಮತ್ತು ಲಿಂಗಸ್ಗೂರು ಪಟ್ಟಣಗಳಲ್ಲಿ ಕಾರ್ಮಿಕರ ಮುಷ್ಕರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ದೇವದುರ್ಗದಲ್ಲಿ ಬಸ್‌ಗಳು ಸಂಚರಿಸಲಿಲ್ಲ. ಆದರೆ ಖಾಸಗಿ ವಾಹನಗಳು ಇದರ ಪ್ರಯೋಜನ ಪಡೆದವು. ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ವ್ಯಾಪಾರ ವಹಿವಾಟು ಎಂದಿನಂತಿತ್ತು.
ಸಿಂಧನೂರು, ಮಾನವಿ ಸಂಪೂರ್ಣ: ಇನ್ನು ಲಿಂಗಸ್ಗೂರು ಪಟ್ಟಣದಲ್ಲಿಯೂ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ ವಾಣಿಜ್ಯ ವಹಿವಾಟು ಎಂದಿನಂತೆಯೇ ನಡೆಯಿತು. ಸಿಂಧನೂರು ಮತ್ತು ಮಾನವಿಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಸಿಂಧನೂರಿನಲ್ಲಿ ವಾಣಿಜ್ಯ ವಹಿವಾಟು, ಶಾಲಾ-ಕಾಲೇಜುಗಳು, ಬಸ್ ಸಂಚಾರ ಸೇರಿದಂತೆ ಎಲ್ಲದರ ಮೇಲೆ ಮುಷ್ಕರದ ಪ್ರಭಾವ ಬೀರಿತ್ತು. ಮಾನವಿ ಪಟ್ಟಣದಲ್ಲಿಯೂ ಕಾರ್ಮಿಕರ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಬಸ್ ಸಂಚಾರ, ವಾಣಿಜ್ಯ ವಹಿವಾಟು, ಶಾಲಾ-ಕಾಲೇಜುಗಳು, ಬ್ಯಾಂಕುಗಳು ಸೇರಿದಂತೆ ಎಲ್ಲ ರೀತಿಯ ವಹಿವಾಟು ಸ್ಥಗಿತಗೊಂಡಿತ್ತು. ಬಂದ್ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲಾದ್ಯಂತ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement