ಮುದಗಲ್; ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
ಮುದಗಲ್: ಬೆಲೆ ಏರಿಕೆ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆದಿದ್ದ ದೇಶವ್ಯಾಪಿ 48 ಗಂಟೆಗಳ ಸಾರ್ವತ್ರಿಕ ಮುಷ್ಕರಕ್ಕೆ ಮುದಗಲ್ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
ಎಂದಿನಂತೆ ಹೋಟೆಲ್ ಮತ್ತು ಅಂಡಿಗಳು ಕಾರ್ಯಪ್ರವೃತ್ತವಾದರೆ, ಸರ್ಕಾರಿ ಬಸ್‌ಗಳು, ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿತ್ತು. ಖಾಸಗಿ ವಾಹನಗಳ ಓಡಾಟ ನಿರಾತಂಕವಾಗಿ ನಡೆದಿತ್ತು. ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಹಮಾಲರು ಮುಷ್ಕರದಲ್ಲಿ ನಿರತರಾಗಿದ್ದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು, ಮುಖ್ಯ ಬಜಾರ್, ತರಕಾರಿ ಮಾರುಕಟ್ಟೆ, ಕಿರಾಣಿ ಬಜಾರ್ ಬಂದ್ ಮಾಡದಿರುವುದರಿಂದ ಮುಷ್ಕರದಿಂದ ಯಾವುದೇ ಪ್ರಭಾವ ಬೀರಲಿಲ್ಲ.
ಹಮಾಲರಿಂದ ಪ್ರತಿಭಟನೆ: ಬೆಲೆ ಏರಿಕೆ ವಿರೋಧಿಸಿ ಸ್ಥಳಿಯ ಎಪಿಎಂಸಿ ಹಮಾಲರು ಎಪಿಎಂಸಿ ಮಾರುಕಟ್ಟೆಯಿಂದ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸಿದರು. ಅನೇಕ ಬೇಡಿಕೆಗಳ ಮನವಿಯನ್ನು ಉಪತಹಸೀಲ್ದಾರ್ ಹುಲಗಪ್ಪಗೆ ನೀಡಿದರು.
ನೇತೃತ್ವವನ್ನು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಸಂಘ (ಸಿಐಟಿಯು)ನ ದಾವಲಸಾಬ ತಲೇಖಾನ, ಸಿಐಟಿಯುನ ಮಲ್ಲಯ್ಯ ಜಾಲಹಳ್ಳಿ, ಉಪಾಧ್ಯಕ್ಷ ಕೆ.ಎಸ್.ಶಿವಾನಂದ, ಪ್ರಧಾನ ಕಾರ್ಯಕದರ್ಶಿ ಹನುಮಂತ ವಾಲ್ಮೀಕಿ , ರಂಗಪ್ಪ ಭಾಗವಹಿಸಿದ್ದರು.