'ವಿಧಾನಸಭೆ' ಛಾಯಾಚಿತ್ರ ಪ್ರದರ್ಶನ
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ಬುಧವಾರ ವಾರ್ತಾ ಇಲಾಖೆಯಿಂದ ವಿಧಾನಸಭೆಯ 60ನೇ ವರ್ಷಾಚರಣೆಯ ನಿಮಿತ್ತ ಏರ್ಪಡಿಸಿದ್ದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿರುವ ಎರಡು ದಿನಗಳ ವಿಶೇಷ ಛಾಯಾಚಿತ್ರ ಪ್ರದರ್ಶನಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಚಾಲನೆ ನೀಡಿ ಮಾತನಾಡಿ, ವಾರ್ತಾ ಇಲಾಖೆಯು ಅತ್ಯುತ್ತಮವಾದ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶಿಸುತ್ತಿರುವುದು ಸಂತಸದ ಸಂಗತಿ. ಶಾಸನಸಭೆ ನಡೆದು ಬಂದ ಬಗೆಯ ಕುರಿತು ಸಂಕ್ಷಿಪ್ತ ಪಕ್ಷಿನೋಟ, ಆಡಳಿತ ರೂವಾರಿಗಳ ವ್ಯಕ್ತಿತ್ವದ ಚಿತ್ರಣ, ಆಡಳಿತ ಕೇಂದ್ರಬಿಂದುವಾದ ವಿಧಾನಸೌಧದ ವಿವಿಧ ಛಾಯಾಚಿತ್ರಗಳು ಅತ್ಯುಪಯುಕ್ತ ಮಾಹಿತಿ ಒದಗಿಸುತ್ತವೆ ಎಂದರು. ಅಪರೂಪದ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕರು, ವಿದ್ಯಾರ್ಥಿಗಳು ನೋಡಲೇಬೇಕಾದ ಛಾಯಾಚಿತ್ರ ಪ್ರದರ್ಶನವಾಗಿದೆ ಎಂದರು. ಸುಮಾರು 200ಕ್ಕೂ ಹೆಚ್ಚಿನ ಸಂಖ್ಯೆಯ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಕನುಮಪ್ಪ ತಿಳಿಸಿದರು.