ಮಟ್ಟೂರು; ವಾಚಕರಿಂದ ಗ್ರಂಥಾಲಯ ದೂರ.. ದೂರ...
ಮುದಗಲ್: ಪಟ್ಟಣ ಸಮೀಪದ ಮಟ್ಟೂರು ಗ್ರಾಪಂ.ನಲ್ಲಿರುವ ಗ್ರಾಮೀಣ ಸಾರ್ವಜನಿಕ ಗ್ರಂಥಾಲಯ ಸದಾ ಮುಚ್ಚಿರುವುದರಿಂದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ಸರ್ಕಾರ ಪ್ರತಿಯೊಂದು ಗ್ರಾಮ ಪಂಚಾಯತಿ ಕೇಂದ್ರ ಸ್ಥಳದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ತೆರೆದು ಪ್ರತಿ ತಿಂಗಳು ಸಾವಿರಾರು ರು. ಖರ್ಚು ಮಾಡುತ್ತಿದೆ. ಆದರೆ ಮಟ್ಟೂರು ಗ್ರಾಮದಲ್ಲಿ ಆರಂಭದಿಂದ ಗ್ರಂಥಾಲಯ ಸರಿಯಾಗಿ ತೆರೆಯುತ್ತಿಲ್ಲ. ಕಟ್ಟಡಕ್ಕೆ ಇದುವರೆಗೂ ವಿದ್ಯುತ್ ವ್ಯವಸ್ಥೆ ಇಲ್ಲ.
ಸರ್ಕಾರ ನೀಡುವ ಗ್ರಂಥಗಳು, ದಿನಪತ್ರಿಕೆ, ಮಾಸಪತ್ರಿಕೆಗಳನ್ನು ಗ್ರಂಥಪಾಲಕರು ತರಿಸುತ್ತಿಲ್ಲ. ಇದರಿಂದಾಗಿ ವಾಚಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಿ ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಗ್ರಂಥಪಾಲಕರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕ ಹಾಗೂ ಓದುಗರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ರಾಯಪ್ಪ,ದೌಲಸಾಬ, ಯಮನೂರ, ರಮೇಶ, ಮಲ್ಲಪ್ಪ, ಶಿವರೆಡ್ಡಿ, ಸುರೇಶ, ದುರುಗೇಶ ಸೇರಿದಂತೆ ಮುಂತಾದವರು ಒತ್ತಾಯಿಸಿದ್ದಾರೆ.