ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಚಿವರ ಅಸಭ್ಯ ವರ್ತನೆ; ಒಪೆಕ್ ಹೋರಾಟ ಸಮಿತಿ ಪ್ರತಿಭಟನೆ

Mainashree
Updated On : 23 Feb 2013, 10:54 am

ರಾಯಚೂರು: ರಾಜೀವಗಾಂಧಿ ಓಪೆಕ್ ಆಸ್ಪತ್ರೆಯನ್ನು ಸರ್ಕಾರಿ ಆದೇಶದಂತೆ ಪುನಃ ಆರಂಭಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲು ತೆರಳಿದ ಓಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮುಖಂಡರೊಂದಿಗೆ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಹೋರಾಟ ಸಮಿತಿಯ ಸಂಚಾಲಕ ಆರ್.ಮಾನಸಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಖಾಸಗಿ ವಸತಿಗೃಹದಲ್ಲಿ ತಂಗಿದ್ದ ಸಚಿವ ಅರವಿಂದ ಲಿಂಬಾವಳಿ ಅವರ ಬಳಿ ತೆರಳಿದ ಹೋರಾಟ ಸಮಿತಿ ಮುಖಂಡರು, ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸರ್ಕಾರಿ ಆದೇಶದಂತೆ ಪುನಃ ಆರಂಭಿಸುವ ಕುರಿತು ಹೋರಾಟ ಸಮಿತಿಯ 11 ಜನರ ನಿಯೋಗ ಬೆಂಗಳೂರಿಗೆ ತೆರಳಿ ಸರ್ಕಾರದ ಜೊತೆ ಮಾತುಕತೆ ನಡೆಸುವ ಕುರಿತು ಸಚಿವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸುವ ಬಗ್ಗೆ ಮತ್ತು ಸರ್ಕಾರದ ಆದೇಶ ಸರ್ಕಾರವೇ ತಿರುವು ಮುರುವು ಮಾಡಿದರೆ ಈ ಭಾಗದ ಜನರ ಆರೋಗ್ಯ ಕೇಳುವವರಾರು ಎಂದು ವಿವರಿಸಲು ಮುಂದಾದರು.
ಕನಿಷ್ಠ ಸೌಜನ್ಯದಿಂದ ಮಾತನಾಡಿ..: ಇದಕ್ಕೆ ಸಚಿವ ಲಿಂಬಾವಳಿ, ಹೋರಾಟ ಸಮಿತಿ ಸಂಚಾಲಕ ಆರ್.ಮಾನಸಯ್ಯ ಅವರೊಂದಿಗೆ ಏಕವಚನದಲ್ಲಿ ಮಾತನಾಡುತ್ತಿರುವುದಾಗಿ ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಮುಖಂಡರು ವಾಗ್ವಾದ ನಡೆದು ಕನಿಷ್ಠ ಸೌಜನ್ಯದಿಂದ ಮಾತನಾಡುವಂತೆ ಒತ್ತಾಯಿಸಿದರು.
ಅಲ್ಲದೆ, ಖಾಸಗಿ ವಸತಿ ಗೃಹದಿಂದ ಹೊರನಡೆದ ಸಮಿತಿ ಮುಖಂಡರು ಒಪೆಕ್ ಆಸ್ಪತ್ರೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹೋರಾಟದ ನಂತರ ಪುನಃ ಸರ್ಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಈಗ ಕೊಟ್ಟ ಮಾತಿಗೆ ಸರ್ಕಾರ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಫೆ. 25ರಂದು ಬೆಂಗಳೂರಿಗೆ ನಿಯೋಗ ತೆರಳುವುದಾಗಿ ವಸತಿ ಗೃಹದ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕ ಆರ್.ಮಾನಸಯ್ಯ, ಮುಖಂಡರಾದ ಅಂಬಣ್ಣ ಅರೋಲಿಕರ್, ಜೆ.ಬಿ. ರಾಜು, ರವೀಂದ್ರನಾಥ ಪಟ್ಟಿ, ಸಿ.ಕೆ. ಜೈನ್, ಜನನಾಥ ಸುಂಕಾರಿ, ಚಂದ್ರಶೇಖರಪ್ಪ, ಮಲ್ಲೇಶ ರಾಂಪೂರ, ಬಸವರಾಜ ಬಾಗಲವಾಡ, ರಾಜಶೇಖರ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement