ಅಂಕಿತಾಗೆ ಜೈನ ಮುನಿ ದೀಕ್ಷೆ ಪ್ರದಾನ
ರಾಯಚೂರು: ನಗರದ ಎಲ್‌ವಿಡಿ ಕಾಲೇಜು ಮೈದಾನದಲ್ಲಿ ಭಗವತೀ ದೀಕ್ಷಾ ಮಹೋತ್ಸವ ಸಮಾರಂಭದಲ್ಲಿ ರಾಜಸ್ಥಾನ್ ಮೂಲದ ಮುಮುಕ್ಷು ಅಕ್ಷಿತಾ ಜೈನ್ ಅವರಿಗೆ ಜೈನ ಮುನಿ ದೀಕ್ಷಾ ಪ್ರದಾನ ಮಾಡಲಾಯಿತು.
ನಗರದ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ದೀಕ್ಷಾ ಪ್ರದಾನ ಸಮಾರಂಭದಲ್ಲಿ ಮುನಿ ನರೇಶ್ ಜೀ ಮಹಾರಾಜ್ ಅವರು ಮುಮುಕ್ಷು ಅಕ್ಷಿತಾ ಜೈನ್ ಅವರಿಗೆ ಭಗವತೀ ದೀಕ್ಷಾ ನೀಡಿ ಅನುಜ್ಞಾಜೀ ಎಂದು ನಾಮಕರಣ ಮಾಡಿದರು.
ನಂತರ ಅವರು ದೀಕ್ಷೆಯ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದರು. ಈ ವೇಳೆ ಮುನಿ ನರೇಶ್ ಜೀ ಮಹಾರಾಜ್ ಅವರು, ಅನುಜ್ಞಾಜೀ ಅವರಿಗೆ ಜೈನ ಮುನಿಗಳಿಗೆ ಮುಂದಿನ ದಿನಗಳಲ್ಲಿ ಜೀವನ ನಡೆಸಲು ಅಗತ್ಯವಿರುವ ಸಾಮಗ್ರಿ ಮತ್ತು ಓಘಾ(ದಂಡಕ)ವನ್ನು ನೀಡಿದರು.
ದೀಕ್ಷಾ ಸ್ವೀಕಾರಕ್ಕೆ ಸಮ್ಮತಿ: ಇದಕ್ಕೂ ಮೊದಲು ಮುಮುಕ್ಷು ಅಕ್ಷಿತಾ ಜೈನ್ ಅವರ ಪಾಲಕರು ತಮ್ಮ ಪುತ್ರಿಯ ಜೈನ್ ದೀಕ್ಷೆ ಸ್ವೀಕಾರಕ್ಕೆ ಸಮ್ಮತಿಸಿ ಸತ್ಕರಿಸಿದರು. ಅದೇ ರೀತಿ ಅವರ ಸಂಬಂಧಿಗಳೂ ಅವರನ್ನು ಹೊದಿಕೆ ನೀಡಿ ಗೌರವಿಸಿದರು. ನಂತರ ನರೇಶ್ ಜೀ ಮಹಾರಾಜ್ ಅವರು ಮತ್ತು ಶಾಲಿಭದ್ರಜೀ ಮಹಾರಾಜ್ ಅವರು ಮಂತ್ರ ಪಠಣ ಮಾಡಿ ಬಡೀ ದೀಕ್ಷಾ ಸಮಾರಂಭವನ್ನು ಮಾ. 3ರಂದು ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದರು.
ಮುನಿ ಅನುಜ್ಞಾಜೀ ಅವರು ಡಾ. ಪ್ರತಿಭಾಜೀ ಅವರ ಅಡಿಯಲ್ಲಿ ಧರ್ಮ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆಂದು ಸಮಾರಂಭದಲ್ಲಿ ಘೋಷಿಸಿದರು.
ನಗರದಲ್ಲಿ ನಡೆದ ಜೈನ್ ಭಗವತೀ ದೀಕ್ಷಾ ಸ್ವೀಕಾರ ಮಹೋತ್ಸವ ಸಮಾರಂಭದಲ್ಲಿ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಜೈನ್ ಧರ್ಮದ ಜನತೆ ಆಗಮಿಸಿದ್ದರು.
ಮೆರವಣಿಗೆ: ಇದಕ್ಕೂ ಮೊದಲು ನಗರದ ಪಾರಸ್ ಗಾರ್ಡನ್‌ನಿಂದ ಮುಮುಕ್ಷು ಸೋದರಿ ಅಕ್ಷಿತಾ ಜೈನ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ನಗರದ ಜೈನ ಸಮಾಜದ ಸಾವಿರಾರು ಸಂಖ್ಯೆಯ ಜನತೆ ಪಾಲ್ಗೊಂಡಿದ್ದರು.