ನೀರಿನ ಕೊರತೆ; ನಾಳೆ ಪ್ರತಿಭಟನೆ
ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಯ ವ್ಯಾಪ್ತಿಯ ಲಿಂಗಸ್ಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ರೈತರು ಬೆಳೆದ ಶೇಂಗಾ ಬೆಳೆ ನೀರಿಲ್ಲದೇ ಒಣಗುತ್ತಿದ್ದು ಆಂತಕದ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಕಾಲುವೆಯಿಂದ ನೀರು ಹರಿಸುವಂತೆ ಆಗ್ರಹಿಸಿ ಫೆ.25ರಂದು ಲಿಂಗಸ್ಗೂರಿನ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಲಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಲಿಂಗಸ್ಗೂರು ತಾಲೂಕಿನಲ್ಲಿ 15 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಶೇಂಗಾ ಬೆಳೆದಿದ್ದು, ನಾರಾಯಣಪುರ ಬಲದಂಡೆ ಕಾಲುವೆಯಿಂದ ಸಮರ್ಪಕ ನೀರು ದೊರೆಯದೇ ಬೆಳೆ ಒಣಗುತ್ತಿದೆ ಎಂದು ಆರೋಪಿಸಿದರು.
ರೈತರಲ್ಲಿ ಆತಂಕ: ತಾಲೂಕು ಕೃಷಿ ಇಲಾಖೆಯು ಹಂಗಾಮಿನ ಆರಂಭದಲ್ಲಿ ಶೇಂಗಾ ಬೆಳೆಯನ್ನು ಸಾಕಷ್ಟು ವಿಳಂಬವಾಗಿ ವಿತರಿಸಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ. ರೈತರು ತಡವಾಗಿ ಶೇಂಗಾ ಬಿತ್ತನೆ ಕೈಗೊಂಡಿದ್ದರಿಂದ ಬೆಳೆಯೂ ತಡವಾಗಿ ಕೈಗೆ ಬರುತ್ತಿದೆ. ಈ ಹಂತದಲ್ಲಿಯೇ ನೀರಿನ ಕೊರತೆಯಾಗಿದ್ದು ರೈತರಲ್ಲಿ ಆತಂಕ ಉಂಟಾಗಿದೆ ಎಂದು ದೂರಿದರು.
ಪ್ರತಿ ಎಕರೆಗೆ ರೈತರು ಶೇಂಗಾ ಬೆಳೆಯಲು ಕನಿಷ್ಠ 25 ಸಾವಿರ ವೆಚ್ಚ ಮಾಡಿದ್ದಾರೆ. ಲಿಂಗಸ್ಗೂರು ಮತ್ತು ದೇವದುರ್ಗ ವ್ಯಾಪ್ತಿಯಲ್ಲಿ 15 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಶೇಂಗಾ ಬೆಳೆ ಬೆಳೆದಿದ್ದಾರೆ. ಆದರೆ ನಾರಾಯಣಪುರ ಬಲದಂಡೆಯಿಂದಲ ನೀರು ದೊರೆಯದೇ ರೈತರು ಬೆಳೆದ ಬೆಳೆ ಒಣಗುತ್ತಿದೆ ಎಂದು ಆರೋಪಿಸಿದರು.
ಕಾಲುವೆ ನೀರು ಸ್ಥಗಿತ: ಈಗಾಗಲೇ ಜಿಲ್ಲಾಡಳಿತ, ನೀರಾವರಿ ಇಲಾಖೆಗಳು ರೈತರೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕೃಷಿ ಕಾರ್ಯಗಳಿಗೆ ನೀರು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಲ್ಲದೇ ಈಗಾಗಲೇ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಳಿಸಲಾಗಿದೆ ಎಂದು ದೂರಿದರು.
ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಆ ಮೂಲಕ ರೈತರ ಹಾನಿಗೆ ಕಾರಣವಾಗಿದೆ. ಜಲಾಶಯಗಳಲ್ಲಿನ ನೀರಿನ ಲಭ್ಯತೆಯ ಬಗ್ಗೆ ಮಾಹಿತಿ ನೀಡುವಲ್ಲಿ ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು.
ಸಚಿವರು ಅವಲೋಕಿಸಲಿ: ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬೆಳೆಗಳ ಸದ್ಯದ ಸ್ಥಿತಿ ಅವಲೋಕಿಸಬೇಕು. ಅಗತ್ಯ ನೀರೊದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ರೈತರಿಗಾಗುವ ಬೆಳೆ ಹಾನಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ವೇಳೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಲಿಂಗಸ್ಗೂರು ಮತ್ತು ದೇವದುರ್ಗ ತಾಲೂಕಿನ ಸಾವಿರಾರು ಸಂಖ್ಯೆಯ ರೈತರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪ್ರಮುಖರಾದ ಅಮರಣ್ಣ ಗುಡಿಹಾಳ ಸೇರಿದಂತೆ ಅನೇಕರಿದ್ದರು.