ಬೆಳೆ ಹಾನಿ ಆತಂಕ; ನೀರು ಬಿಡುಗಡೆಗೆ ಸಂಘ ಒತ್ತಾಯ
ಲಿಂಗಸ್ಗೂರು: ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಫೆ. 20ರಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗುವ ಸಾಧ್ಯತೆಯಿದೆ. ಕೂಡಲೇ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಅವರು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಅವರನ್ನು ಒತ್ತಾಯಿಸಿದರು.
ನಾರಾಯಣಪುರ ಜಲಾಶದ ಬಲದಂಡೆ ಕಾಲುವೆ ವ್ಯಾಪ್ತಿಯ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ ಶೇಂಗಾ, ಸಜ್ಜೆ, ಹತ್ತಿ, ಕಡಲೆ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ನೀರಿನ ಅಭಾವದಿಂದ ನಷ್ಟ ಸಂಭವಿಸುವ ಸಾಧ್ಯತೆ ಇರುವ ಕುರಿತು ರೈತರು ಇತ್ತಿಚಿಗೆ ತಾವು ನೀರಾವರಿ ಅಧಿಕಾರಿಗಳ ಮತ್ತು ರೈತರ ಸಭೆ ಕರೆದ ಸಂದರ್ಭದಲ್ಲಿ ಮನವಿ ಮಾಡಿದಾಗ ಇನ್ನು 5-6 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಿರಿ. ಕಾರಣ ಸರ್ಕಾರಕ್ಕೆ ಮತ್ತು ನೀರಾವರಿ ಅಧಿಕಾರಿಗಳಿಗೆ ರೈತರ ಸಂಕಷ್ಟ ಕುರಿತು ಮಾಹಿತಿ ಕಳುಹಿಸಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ರೈತರ ಸಮಸ್ಯೆ ಕುರಿತು ಸರ್ಕಾರಕ್ಕೆ ಮತ್ತು ನೀರಾವರಿ ಅಧಿಕಾರಿಗಳ ಜೊತೆ ಮಾಹಿತಿ ಕಳುಹಿಸಲಾಗುವುದು. ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಹಾಯಕ ಆಯುಕ್ತ ಟಿ.ಯೋಗೇಶ, ತಹಸೀಲ್ದಾರ್ ಎನ್.ಬಿ. ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಈರಣ್ಣ, ಸಿಡಿಪಿಒ ಪ್ರಭಾಕರ ಸೇರಿದಂತೆ ಇದ್ದರು.