ಸಂಕ್ಷಿಪ್ತ ಸುದ್ದಿ
ಯೋಜನೆಗಳ ಸದುಪಯೋಗಕ್ಕೆ ವಿಶ್ವನಾಥ ಕರೆ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದ ಸಹಕಾರಿ ಸಂಘಗಳ ಯೋಜನೆಗಳ ಉಪಯೋಗಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಪ್ರತಿಯೊಬ್ಬರು ಅಭಿವೃದ್ಧಿ ಹೊಂದುವಂತೆ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಕರೆ ನೀಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರಾಜ್ಯ ಸಹಕಾರಿ ಇಲಾಖೆಗಳ ವಿವಿಧ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಲಂ 97ನೇ ಅಧಿ ನಿಯಮ ಕುರಿತು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಗಾರವನ್ನುದ್ದೇಶಿಸಿ ಆರ್‌ಡಿಸಿಸಿ ಬ್ಯಾಂಕಿನ ಎಸ್.ಜಿ.ರಾಠೋಡ, ಗ್ರಾಪಂ ಉಪಾಧ್ಯಕ್ಷ ಎಚ್.ಮಹಾಭಳೇಶ್ವರ, ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ ಮಾತನಾಡಿದರು. ಸಹಕಾರಿ ಧುರೀಣರಾದ ಮರಿಯಪ್ಪ ಅಂಬ್ಲಿ, ಪಂಪನಗೌಡ ಮಾ.ಪಾ, ಬಸನಗೌಡ ಮುದೇಗೌಡರ, ಗೋವಿಂದರೆಡ್ಡಿ ಗದ್ದಿ, ವಿರುಪಣ್ಣ ಗುತ್ತೇದಾರ, ಚನ್ನಬಸವಕೊಂಡ್ರಡ್ಡಿ, ಟಿ.ಸಿದ್ದರಾಮಪ್ಪ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಬಳಗಾನೂರು, ಉದ್ಬಾಳ, ಗೌಡನಭಾವಿ ಗುಡದೂರು, ದಿದ್ಗಿ, ದೀನಸಮುದ್ರ, ಸೇರಿದಂತೆ ವಿವಿಧ ಗ್ರಾಮಗಳ ಸಹಕಾರಿ ಸಂಘಗಳ ಪ್ರತಿನಿಧಿಗಳು, ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಒಕ್ಕೂಟದ ಮುಖ್ಯಸ್ಥೆ ಅನ್ನಪೂರ್ಣ ಹೇಮವಾಡಗಿ ನಿರೂಪಿಸಿ ವಂದಿಸಿದರು.
27ರಂದು ಶಾಲೆಗೆ ಹನ್ನೊಂದರ ಸಂಭ್ರಮ
ಸಿಂಧನೂರು: ವಾಸವಿ ನಗರದಲ್ಲಿರುವ ನೂತನ ಹಿರಿಯ ಪ್ರಾಥಮಿಕ ಶಾಲೆಯ ಹನ್ನೊಂದರ ಸಂಭ್ರಮ ಕಾರ್ಯಕ್ರಮ ಫೆ.27 ರಂದು ಸಂಜೆ 5ಕ್ಕೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಹ್ಲಾದ ಗುಡಿ ವಕೀಲರು ಹಾಗೂ ಆಡಳಿತಾಧಿಕಾರಿ ಮನೋಹರರಾವ್ ಕುಲಕರ್ಣಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಕಳೆದ ಹನ್ನೊಂದು ವರ್ಷಗಳಿಂದ ವಾಸವಿ ನಗರದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿರುವ ಏಕೈಕ ಶಾಲೆ ಇದಾಗಿದೆ. ಈ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಉತೃಷ್ಟ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀವೆಂಕಟನಾಥ ಸುವಿದ್ಯಾ ಗುರುಕುಲ ಮಾನ್ವಿಯ ಕುಲಪತಿಗಳು ಹಾಗೂ ಮಂತ್ರಾಲಯ ಮಠದ ಪೀಠಾಧಿಪತಿ ಸುವಿಧ್ಯೇಂದ್ರತೀರ್ಥ ಶ್ರೀಪಾದಂಗಳವರು ವಹಿಸುವರು. ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಆರ್.ವಿ. ಜೋಷಿ ವಹಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಹಿರಿಯ ಸಾಹಿತಿ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ವೃಷಭೇಂದ್ರಯ್ಯಸ್ವಾಮಿ, ನೂತನ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ವೆಂಕಣ್ಣಾಚಾರ ಜೋಷಿ ದೋಟಿಹಾಳ ಪಾಲ್ಗೊಳ್ಳುವರು.