ಅಭಿಯಾನ ಯಶಸ್ವಿಗೆ ಇಲಾಖೆಗಳ ಸಹಕಾರ ಅಗತ್ಯ: ಡಿಸಿ
ರಾಯಚೂರು: ನಗರದ ಜಹೀರಾಬಾದ್ ಪ್ರದೇಶದ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಭಾನುವಾರ ಜಿಲ್ಲಾಧಿಕಾರಿ ನಾಗರಾಜು ಚಾಲನೆ ನೀಡಿದರು.
ಈ ವೇಳೆ ಮಕ್ಕಳಿಗೆ ಲಸಿಕೆ ಹಾಕಿ ಮಾತನಾಡಿದ ಅವರು, 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಪೋಲಿಯೋ ನಿರ್ಮೂಲನೆಗೆ ಸಹಕರಿಸುವಂತೆ ಮನವಿ ಮಾಡಿದರು.
ಪೋಲಿಯೋ ಲಸಿಕಾ ಅಭಿಯಾನದ ಯಶಸ್ವಿಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಹಾಗೆಯೇ ಸಾರ್ವಜನಿಕರೂ ಸಹ ಸ್ವಯಂಪ್ರೇರಿತರಾಗಿ ಮುಂದೆ ಬಂದು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ. ವೆಂಕಟೇಶ ನಾಯಕ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಆರ್. ಭೀಡ್, ಡಾ. ನಸೀರ್, ಡಾ. ಸುರೇಂದ್ರಬಾಬು, ಮುಖ್ಯ ಶಿಕ್ಷಕ ಭೀಮಪ್ಪ, ಡಾ. ಬಸವರಾಜ್, ಡಾ. ಶ್ರೀನಿವಾಸ ರಾಯಚೂರುಕರ್, ವಿಠ್ಠಲರಾವ್ ಸೇರಿದಂತೆ ಅನೇಕರಿದ್ದರು.