ಸಂಕ್ಷಿಪ್ತ ಸುದ್ದಿ
'ಹೈ' ಬಾಂಬ್ ಸ್ಫೋಟ: ಖಂಡನೆ
ಸಿಂಧನೂರು: ಹೈದ್ರಾಬಾದ್ನ ದಿಲ್ಸುಖ್ ನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದು ಅವಳಿ ಬಾಂಬ್ ಸ್ಫೋಟ ನಡೆದು 16 ಜನರನ್ನು ಬಲಿ ತೆಗೆದುಕೊಂಡು ಉಳಿದ ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಸಾರ್ವಜನಿಕರನ್ನು ದಿಗ್ಭ್ರಾಂತರನ್ನಾಗಿಸುವಂತೆ ಮಾಡಿದೆ. ಈ ನರಮೇಧ ಹತ್ಯೆಯ ಹೀನ ಕೃತ್ಯವನ್ನು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯ ತೀವ್ರವಾಗಿ ಖಂಡಿಸಿಸುತ್ತದೆ ಎಂದು ರಾಜ್ಯ ಸಂಚಾಲಕ ಕೆ. ಬಾಳಪ್ಪ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ 2007ರಲ್ಲಿ ಚಾರ್ಮಿನಾರ್ನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ ನಡೆಸಿ 14 ಜನರನ್ನು ಬಲಿ ತೆಗೆದುಕೊಂಡು ಹಲವಾರು ಜನರನ್ನು ಗಾಯಗೊಳಿಸಿದ್ದರು. ಆಗಿನ ಕೇಂದ್ರದ ಗೃಹ ಸಚಿವರಾಗಿದ್ದ ಸುಶೀಲಕುಮಾರ ಶಿಂದೆ ಅವರು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳನಾಡು, ಆಂಧ್ರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಉಗ್ರರು ಮತ್ತೆ ದಾಳಿಗೆ ಸಂಚು ನಡೆಸುವ ಸಂಭವವುಂಟು. ಸಾರ್ವಜನಿಕ ಸ್ಥಳಗಳು, ದೇವಾಲಯಗಳು, ಮಸೀದಿ, ಚರ್ಚೆ ಹಾಗೂ ಅಣೆಕಟ್ಟುಗಳಲ್ಲಿ ಕಟ್ಟೆಚ್ಚರ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಒದಗಿಸಬೇಕೆಂದು ಜಿಲ್ಲಾ ಉಪಾಧ್ಯಕ್ಷ ರಡ್ಡೆಪ್ಪ ತೂಗೇಮನಿ, ಯಂಕಪ್ಪ ಹೆಡಗಿನಾಳ, ಕಾಟಿಬೇಸ್ ಅಧ್ಯಕ್ಷ ಹಸನ ಟೇಲರ್ ಸಲೀಂ ಜವಳಗೇರಾ, ತಿಮ್ಮಣ್ಣ ಯಾದವ, ಅವಿನಾಶ ದೇಶಪಾಂಡೆ ಆಗ್ರಹಿಸಿದ್ದಾರೆ.
ಮಕ್ಕಳ ದತ್ತು: ಮಾಹಿತಿ ನೀಡಿಕೆ
ರಾಯಚೂರು: ಮಾನವಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ವಾತ್ಸಲ್ಯ ಚಾರಿಟಬಲ್ ಟ್ರಸ್ಟ್ನಿಂದ ಅನಾಥ ಮಕ್ಕಳ ದತ್ತು ನೀಡಿಕೆ ಕುರಿತ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಟ್ರಸ್ಟ್ನ ಜಿಲ್ಲಾ ಸಂಯೋಜಕ ಹನುಮಂತಪ್ಪ, ಜಿಲ್ಲೆಯಲ್ಲಿ ಅನಾಥ ಮಕ್ಕಳು ಕಂಡುಬಂದಲ್ಲಿ ಅಂಥವರನ್ನು ಸಂಸ್ಥೆಗೆ ವಹಿಸಿಕೊಡುವಂತೆ ಸಭೆಯಲ್ಲಿದ್ದವರಿಗೆ ಮನವಿ ಮಾಡಿದರು. ಈ ವೇಳೆ ಗ್ರಾಮದ ಆಸ್ಪತ್ರೆಯ ಆರೋಗ್ಯ ಮೇಲ್ವಿಚಾರಕಿ ಗಂಗಮ್ಮ, ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.
ಇಂದು ಬಸವ ಬೆಳಕು
ಶಹಾಪುರ: ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ವತಿಯಿಂದ ಫೆ.25ರಂದು ಸಂಜೆ 6-30ಕ್ಕೆ ತಿಂಗಳ ಬಸವ ಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಎಂಬ ವಿಷಯ ಕುರಿತು ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಗುಲ್ಬರ್ಗ ಅವರು ಅನುಭಾವ ನೀಡಲಿದ್ದಾರೆ. ಬಸವ ಜ್ಯೋತಿಯನ್ನು ಶರಣೆ ಬಸಮ್ಮ ಗಿರೆಪ್ಪಗೌಡ ಬಾಣತಿಹಾಳ ಬೆಳಗಲಿದ್ದಾರೆ.