ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾಮೀಣ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಜಲ್ದಾರ್‌ಗೆ ಗುಡ್‌ಬೈ

Lingaraj Badiger
Updated On : 26 Feb 2013, 10:56 am

ರಾಯಚೂರು: ನಗರಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ಶಾಸಕ ಸೈಯದ್ ಯಾಸೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ವರ್ತನೆ ಖಂಡಿಸಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ರಾಯಚೂರು ವಿಧಾನಸಭೆ ಕ್ಷೇತ್ರದ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರವೀಂದ್ರ ಜಲ್ದಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆಯನ್ನೂ ಕಡೆಗಣಿಸಿ ಜಿಲ್ಲಾಧ್ಯಕ್ಷ ವಸಂತಕುಮಾರ್ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ದೊರೆಯದ ಬಿ ಫಾರಂ- ಪಕ್ಷೇತರರಾಗಿ ಸ್ಪರ್ಧೆ: ಶಾಸಕ ಸೈಯದ್ ಯಾಸೀನ್ ಮತ್ತು ನಗರ ಘಟಕದ ಅಧ್ಯಕ್ಷ ಬಸವರಾಜರೆಡ್ಡಿ ಅವರೂ ಜಿಲ್ಲಾಧ್ಯಕ್ಷರ ಅಣತಿಯಂತೆ ಕಾರ್ಯನಿರ್ವಹಿಸಿರುವುದು ಟಿಕೆಟ್ ಹಂಚಿಕೆಯಿಂದ ಸ್ಪಷ್ಟವಾಗಿದೆ. ಈ ಮೂವರು ನಾಯಕರ ವರ್ತನೆಯಿಂದ ಮನನೊಂದು ರಾಯಚೂರು ವಿಧಾನಸಭೆ ಕ್ಷೇತ್ರದ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ ಅವರು, ತಾವೂ ಸೇರಿದಂತೆ ಅನೇಕರು ಪಕ್ಷದ ಬಿ ಫಾರಂ ದೊರೆಯದ್ದರಿಂದ ಪಕ್ಷೇತರರಾಗಿ ಕಣದಲ್ಲುಳಿಯುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ 1ನೇ ವಾರ್ಡಿಗೆ ಸ್ಪರ್ಧೆ ಬಯಸಿ ಈಗಾಗಲೇ ತಾವು ನಾಮಪತ್ರ ಸಲ್ಲಿಸಿದ್ದು, ಬಿ ಫಾರಂ ನೀಡದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿಯುವುದಾಗಿ ತಿಳಿಸಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಮಾಡಿದ ಅನ್ಯಾಯದ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ಸಲ್ಲಿಸುವ ನಿಟ್ಟಿನಲ್ಲಿ ಶೀಘ್ರ ನಿಯೋಗ ತೆರಳುವುದಾಗಿ ಎಚ್ಚರಿಸಿದರು.
ದುರಹಂಕಾರಿ ವರ್ತನೆ- ಟೀಕೆ: ಪಕ್ಷದ ವರಿಷ್ಠರು ತಮ್ಮ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಲ್ಲಿ ಅದನ್ನು ಸಮರ್ಥವಾಗಿ ಎದುರಿಸುವುದಾಗಿ ಹೇಳಿದ ಜಲ್ದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಅವರ ದುರಂಹಕಾರಿ ವರ್ತನೆಯಿಂದ ಪಕ್ಷ ಅಧೋಗತಿಗೆ ತಲುಪಿದೆ ಎಂದು ಟೀಕಿಸಿದರು.
ಕಳೆದ ಬಾರಿಯೂ ತಮಗೆ ಕೊನೆಯ ಗಳಿಗೆಯವರೆಗೆ ಟಿಕೆಟ್ ಭರವಸೆ ನೀಡಿ ನಂತರದಲ್ಲಿ ನಿರಾಕರಿಸಲಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಪಕ್ಷದ ನಾಯಕರು ವರ್ತಿಸಿದ್ದಾರೆ. ತಾಪಂ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದಾಗ ತಮ್ಮ ಸೋಲಿಗೆ ಕಾಂಗ್ರೆಸ್ ಪಕ್ಷದವರೇ ಸಾಕಷ್ಟು ಪ್ರಯತ್ನಿಸಿದರೆಂದು ಆರೋಪಿಸಿದರು.
ಶೀಘ್ರವೇ ಕೆಪಿಸಿಸಿಗೆ ದೂರು: ಪಕ್ಷದ ವೀಕ್ಷಕರು ಹಾಗೂ ವರಿಷ್ಠರ ಸೂಚನೆ ಕಡೆಗಣಿಸಿದ ಜಿಲ್ಲಾ ಘಟಕದ ಪ್ರಮುಖರು ಕಾಟಾಚಾರದ ಸಭೆಗಳನ್ನು ನಡೆಸಿ ಕೊನೆಗೆ ತಮಗೆ ಬೇಕಾದವರಿಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ಪಾರಸಮಲ್ ಸುಖಾಣಿ ಅವರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಮೂವರು ನಾಯಕರ ವಿರುದ್ಧ ಶೀಘ್ರವೇ ಕೆಪಿಸಿಸಿಗೆ ದೂರಲಾಗುತ್ತದೆ ಎಂದು ತಿಳಿಸಿದರು.
ಇದೇ ಧೋರಣೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವುದರಲ್ಲಿ ಸಂದೇಹವಿಲ್ಲ. ಸದ್ಯದ ನಗರಸಭೆಯ ಚುನಾವಣೆಯಲ್ಲಿ ಪಕ್ಷದ ನೂರಕ್ಕೂ ಹೆಚ್ಚು ಪ್ರಾಮಾಣಿಕ ಕಾರ್ಯಕರ್ತರು ಅಧಿಕೃತ ಅಭ್ಯರ್ಥಿಗಳ ವಿರುದ್ಧ ವಿವಿಧೆಡೆ ಸ್ಪರ್ಧಿಸಿದ್ದಾರೆಂದು ದೂರಿದರು.
ಪಕ್ಷೇತರರಾಗಿ..: ನಗರದ 8ನೇ ವಾರ್ಡಿನಿಂದ ಶಂಶುದ್ದೀನ್, 22ನೇ ವಾರ್ಡಿನಿಂದ ನಾಗರಾಜ್, 30ನೇ ವಾರ್ಡಿನಿಂದ ಲಕ್ಷ್ಮಣ, 3ನೇ ವಾರ್ಡಿನಿಂದ ತಾಜುದ್ದೀನ್ ಹಾಗೂ 28ನೇ ವಾರ್ಡಿನಿಂದ ನೂರುದ್ದೀನ್ ಸೇರಿದಂತೆ ನಗರದಲ್ಲಿ ಅನೇಕ ಕಾಂಗ್ರೆಸ್ಸಿಗರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿಯಲಿದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್, ಶಾಸಕ ಸೈಯದ್ ಯಾಸೀನ್ ಹಾಗೂ ನಗರ ಘಟಕದ ಅಧ್ಯಕ್ಷ ಬಸವರಾಜ ರೆಡ್ಡಿ ಅವರ ವರ್ತನೆಯಿಂದ ಬೇಸತ್ತು ತಾವು ರಾಯಚೂರು ವಿಧಾನಸಭೆ ಕ್ಷೇತ್ರದ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವುದಾಗಿ ರವೀಂದ್ರ ಜಲ್ದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಶಂಶುದ್ದೀನ್, ನಾಗರಾಜ್, ಲಕ್ಷ್ಮಣ, ನೂರುದ್ದೀನ್, ತಾಜುದ್ದೀನ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement