ರಾಂಪುರ ಕೆರೆ ಶೀಘ್ರವೇ ಭರ್ತಿ
ರಾಯಚೂರು: ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿತ ಜಲಾಶಯವನ್ನು ನೆಚ್ಚಿಕೊಂಡಿರುವ ಜನತೆಗೆ ಕಂಗಾಲಾಗಿಸಿದೆ. ಈ ಮಧ್ಯೆ ಬೇಸಿಗೆಯ ಪ್ರಾರಂಭದಲ್ಲಿಯೇ ನಗರಕ್ಕೆ ಕುಡಿವ ನೀರಿನ ಅಭಾವದ ಬಿಸಿ ತಟ್ಟಿದೆ. ಹೀಗಾಗಿ ಸದ್ಯ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ತಡವಾಗಿಯಾದರೂ ಜಿಲ್ಲಾಡಳಿತ ಎಚ್ಚೆತ್ತು ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಒಂದೆರಡು ದಿನದಲ್ಲಿ ರಾಂಪುರ ಕೆರೆ ಭರ್ತಿ ಕಾರ್ಯ ಆರಂಭಗೊಳ್ಳಲಿದೆ.
ವಿಳಂಬ: ನಗರದ ಬಹುತೇಕ ಎಲ್ಲ 35ವಾರ್ಡುಗಳಿಗೆ ಸದ್ಯ ಎರಡು ದಿನಕ್ಕೊಮ್ಮೆ ನೀರೊದಗಿಸಲಾಗುತ್ತಿದೆ. ನಗರದ ಕೆಲ ಪ್ರದೇಶಕ್ಕೆ ನೀರೊದಗಿಸುವ ರಾಂಪುರ ಕೆರೆ ಬರಿದಾಗಿರುವುದೇ ಅದಕ್ಕೆ ಕಾರಣ. ನಗರದಲ್ಲಿ ಕುಡಿವ ನೀರಿನ ಪರಿಸ್ಥಿತಿ ಕೈಮೀರುವವರೆಗೆ ಮೌನವಾಗಿದ್ದ ಜಿಲ್ಲಾಡಳಿತ ರಾಂಪುರ ಕೆರೆ ಬರಿದಾದ ಮೇಲೆ ಎಚ್ಚೆತ್ತುಕೊಂಡಿತು. ಪರಿಣಾಮ ರಾಂಪುರ ಕೆರೆ ಭರ್ತಿ ವಿಳಂಬ.
ಕೃಷಿಗೆ ತಡೆ: ಜಿಲ್ಲಾಡಳಿತ ಕಳೆದ ಕೆಲ ದಿನಗಳಿಂದ ತುಂಗಭದ್ರಾ ಜಲಾಶಯದಿಂದ ಎಡದಂಡೆಯ ಮೂಲಕ ಗಣೇಕಲ್ ಜಲಾಶಯದ ಭರ್ತಿಗೆ ಹೆಚ್ಚಿನ ಗಮನ ನೀಡಿದೆ. ಕಾಲುವೆಯ ಮೇಲೆ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಕಾಲುವೆಯಲ್ಲಿ ಹರಿಯುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ಮೊದಲಿಗೆ ತಡೆಯಿತು.
ಅದರ ಪರಿಣಾಮ ಗಣೇಕಲ್ ಜಲಾಶಯಕ್ಕೆ ನದಿ ನೀರು ಬಂದು ಸೇರಿತು. ಕಳೆದ ವಾರ ಗಣೇಕಲ್ ಜಲಾಶಯ ತಳ ಕ್ಕಚ್ಚಿದ್ದರಿಂದ ಆತಂಕದ ಸ್ಥಿತಿಯಿತ್ತು. ಬೇಸಿಗೆಯ ಕೊನೆಯವರೆಗೆ ರಾಯಚೂರು ನಗರ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿವ ನೀರಿಗೆ ಗಣೇಕಲ್ ಜಲಾಶಯವೇ ಆಧಾರ.
ಆರಂಭ: ಕಳೆದೊಂದು ವಾರದಿಂದ ಜಿಲ್ಲಾಡಳಿತ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಈಗ ಗಣೇಕಲ್ ಜಲಾಶಯದಲ್ಲಿ ನೀರಿನ ಮಟ್ಟ 15 ಅಡಿಗೆ ತಲುಪಿದೆ. ಜಿಲ್ಲಾಡಳಿತ ನಿಟ್ಟುಸಿರಿಟ್ಟಿದೆ. ಸದ್ಯ ಜಿಲ್ಲಾಡಳಿತ ಒಂದೆರಡು ದಿನದಲ್ಲಿ ಗಣೇಕಲ್ ಜಲಾಶಯದಲ್ಲಿನ ನೀರನ್ನು ಎಡದಂಡೆ ಕಾಲುವೆ ಮೂಲಕ ರಾಂಪುರ ಕೆರೆಗೆ ಹರಿಸುವ ಕಾರ್ಯ ಆರಂಭಗೊಳ್ಳಲಿದೆ.
ಈಗಾಗಲೇ ನಗರಸಭೆಯ ಅಧಿಕಾರಿಗಳು ರಾಂಪುರ ಕೆರೆಯಲ್ಲಿ ನೀರಿನ ಸಂಗ್ರಹಕ್ಕೆ ಅಗತ್ಯ ಪೂರಕ ಸಿದ್ಧತೆ ಮಾಡಿಕೊಳ್ಳುವತ್ತ ಗಮನಹರಿಸಿದ್ದಾರೆ. ಆ ಮೂಲಕ ಮುಂದಿನ ಒಂದು ವಾರದಲ್ಲಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಪರಿಸ್ಥಿತಿ ಕಡಿಮೆಯಾಗುವ ಲಕ್ಷಣಗಳು ತೋರಿವೆ.
ಈ ಮಧ್ಯೆ ನಗರಸಭೆಯ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ನಗರದ ಕುಡಿವ ನೀರಿನ ಸಮಸ್ಯೆಯ ಬಿಸಿ ಪ್ರಚಾರಕ್ಕೆ ತೆರಳುವ ಜನಪ್ರತಿನಿಧಿಗಳಿಗೂ ತಟ್ಟುವುದರಲ್ಲಿ ಅನುಮಾನವಿಲ್ಲ.
ರಾಂಪುರ ಕೆರೆಗೆ ನೀರು; ನಿಷೇಧಾಜ್ಞೆ ಜಾರಿ
ರಾಯಚೂರು: ಗಣೇಕಲ್ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರೊದಗಿಸುವ ರಾಂಪುರ ಕೆರೆಗೆ ನೀರು ಭರ್ತಿ ಮಾಡಿಕೊಳ್ಳಲು ಜಿಲ್ಲಾಡಳಿತವು ಫೆ. 25ರಿಂದಲೇ ಎಡದಂಡೆ ಕಾಲುವೆಯ ವಿತರಣೆ ಕಾಲುವೆಗಳ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ನಾಗರಾಜು ಅವರು ಪ್ರಕಟಣೆ ನೀಡಿ, ರಾಂಪುರ ಕೆರೆಗೆ ಫೆ. 25ರ ಸಂಜೆಯಿಂದಲೇ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಣೇಕಲ್ ಜಲಾಶಯದಿಂದ ಎಡದಂಡೆಯ ಮೂಲಕ ನೀರು ಸಾಗುವ ವೇಳೆ ನೀರು ಪೋಲಾಗದಂತೆ ತಡೆಯುವ ನಿಟ್ಟಿನಲ್ಲಿ 95ರಿಂದ 100ರ ವರೆಗಿನ ವಿತರಣೆ ಕಾಲುವೆಗಳ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಈ ನಿಷೇಧಾಜ್ಞೆ ವಿತರಣಾ ಕಾಲುವೆಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಫೆ.25ರಿಂದ ಮಾ. 10ರವರೆಗೆ ಜಾರಿಯಲ್ಲಿರಲಿದ್ದು, ನಗರಸಭೆಯ ಎಲ್ಲ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.