ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರೇಪ್ ಗೇಮ್ ನಿಷೇಧಿಸಲು ಕೇಂದ್ರಕ್ಕೆ ಆಗ್ರಹ

Lingaraj Badiger
Updated On : 26 Feb 2013, 11:00 am

ರಾಯಚೂರು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಸುಜಯ್ ಕುಮಾರ್ ಅವರು ರೇಪ್ ಗೇಮ್ ಎಂಬ ವೀಡಿಯೋ ಗೇಮ್ ನಿಷೇಧಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಾಡಿದ ಮನವಿಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ನ ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ, ಜಪಾನಿನಲ್ಲಿ ತಯಾರಿಸಿದ ಈ ಆಟದಲ್ಲಿ ಒಬ್ಬ ಮಹಿಳೆ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುವ ಸವಾಲು ಒಡ್ಡುತ್ತದೆ. ಇಂತಹ ಆಟಗಳು, ಮಕ್ಕಳು ಮತ್ತು ಯುವಕರಲ್ಲಿ ಹಿಂಸಾ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಬಳಸಿಕೊಂಡು ಇಂತಹ ಆಟಗಳನ್ನು ನಿಷೇಧಿಸಲು ಒತ್ತಾಯಿಸಿರುವುದು ಮೆಚ್ಚುಗೆಯ ಸಂಗತಿ ಎಂದು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ 67ನೇ ಪರಿಚ್ಛೇದದ ಪ್ರಕಾರ ಇಂತಹ ಆಟಗಳನ್ನು ರೂಪಿಸುವವರಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಈ ಆಟವನ್ನು, ಅರ್ಜೆಂಟೈನಾ, ಮಲೇಶಿಯಾ, ಥೈಲ್ಯಾಂಡ್ ಮುಂತಾದ ರಾಷ್ಟ್ರಗಳು ಈಗಾಗಲೇ ನಿಷೇಧಿಸಿವೆ. ಆದರೆ ಭಾರತ ಹಾಗೂ ಇನ್ನಿತರ ಅನೇಕ ದೇಶಗಳಲ್ಲಿ ಇದು ಸುಲಭವಾಗಿ ಹಾಗೂ ಉಚಿತವಾಗಿ ಲಭ್ಯವಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಯುವಜನತೆಯನ್ನು ಅಪರಾಧಿಗಳನ್ನಾಗಿಸುವ ಹಾಗೂ ಮಹಿಳೆಯರ ಮೇಲಿನ ಅಪರಾಧಗಳನ್ನು ಹೆಚ್ಚಿಸುವಂತಹ ಆಟಗಳನ್ನು ನಿಷೇಧಿಸಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement