ರಾಂಪುರ ಕೆರೆ ಭರ್ತಿ ಕಾರ್ಯಾರಂಭ
ರಾಯಚೂರು: ನಗರಕ್ಕೆ ಕುಡಿವ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮ ಸಫಲವಾಗಿದ್ದು, ಗಣೇಕಲ್ ಜಲಾಶಯದಲ್ಲಿ ಅಗತ್ಯ ನೀರು ಸಂಗ್ರಹ ಸಾಧ್ಯವಾಗಿದೆ. ಅದರ ಬೆನ್ನಲ್ಲೇ ಜಿಲ್ಲಾಡಳಿತವು ಮಂಗಳವಾರದಿಂದಲೇ ಗಣೇಕಲ್‌ನಿಂದ ರಾಂಪುರ ಕೆರೆಗೆ ಎಡದಂಡೆಯ ಮೂಲಕ ನೀರು ಹರಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ.
ಅಭಾವ: ಕಳೆದೊಂದು ತಿಂಗಳಿನಿಂದ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಒದಗಿಸಲಾಗುತ್ತಿದೆ. ನಗರದ 8ಕ್ಕೂ ಹೆಚ್ಚು ವಾರ್ಡುಗಳಿಗೆ ನೀರೊದಗಿಸುವ ರಾಂಪುರ ಕೆರೆಯಲ್ಲಿ ಕಳೆದೊಂದು ತಿಂಗಳಿನಿಂದ ನೀರಿನ ಸಂಗ್ರಹ ತಳಕಚ್ಚಿತ್ತು. ಅದರಿಂದ ನಗರದಲ್ಲಿ ನೀರಿನ ಅಭಾವ ತಲೆದೋರಿತ್ತು.
ಆ ಹಿನ್ನೆಲೆಯಲ್ಲಿ ನಗರಸಭೆಯು ಮೊದಲಿಗೆ ರಾಂಪುರ ಕೆರೆಯಿಂದ ನೀರು ಪಡೆಯುತ್ತಿದ್ದ ಪ್ರದೇಶಕ್ಕೆ ಎರಡು ದಿನಕ್ಕೊಮ್ಮೆ ನೀರು ಹರಿಸುವುದಾಗಿ ತಿಳಿಸಿತು. ಆದರೆ ಆನಂತರದಲ್ಲಿ ರಾಂಪುರ ಕೆರೆ ಬರಿದಾಗಿದ್ದರಿಂದ ಕೃಷ್ಣಾ ಕುಡಿಯುವ ನೀರಿನ ಯೋಜನೆಯಡಿ ನೀರನ್ನೇ ಇಡೀ ನಗರಕ್ಕೆ ಒದಗಿಸಬೇಕಾಗಿ ಬಂದಿತು.
ಅದರಿಂದಾಗಿ ನಗರಾದ್ಯಂತ ಎರಡು ದಿನಕ್ಕೊಮ್ಮೆ ನೀರು ಹರಿಸುವ ಅನಿವಾರ್ಯತೆ ಎದುರಾಯಿತು. ಹೀಗಾಗಿ ಕಳೆದ ಬಹುತೇಕ ತಿಂಗಳಿನಿಂದ ನಗರದ ಬಹುತೇಕ ಎಲ್ಲ ವಾರ್ಡುಗಳ ನಿವಾಸಿಗಳಿಗೆ ಬೇಸಿಗೆಯ ಆರಂಭದ ಬಿರುಬಿಸಿಲ ಜತೆಗೆ ನೀರಿನ ಅಭಾವದ ಬಿಸಿಯೂ ತಟ್ಟಿತ್ತು.
ಭರ್ತಿ: ಆದರೆ ಸದ್ಯ ರಾಂಪುರ ಕೆರೆಗೆ ನೀರೊದಗಿಸುವ ಗಣೇಕಲ್ ಸಮನಾಂತರ ಜಲಾಶಯ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆಯಿಂದಲೇ ಗಣೇಕಲ್ ಜಲಾಶಯದಿಂದ ನೀರು ಎಡದಂಡೆ ಕಾಲುವೆಗೆ ಹರಿಸಲಾರಂಭಿಸಿದೆ. ಈಗಾಗಲೇ ತುಂಗಭದ್ರಾ ನದಿ ನೀರು ಎಡದಂಡೆ ಕಾಲುವೆಯ ಮೂಲಕ ರಾಂಪುರ ಕೆರೆ ಬಳಿ ಬಂದು ಸೇರಿದೆ.
ಹೇಳಿಕೆ: ರಾಂಪುರ ಕೆರೆಗೆ ನೀರು ತುಂಬಿಸುವ ಕಾರ್ಯ ಮಂಗಳವಾರ ಸಂಜೆ ಹೊತ್ತಿಗೆ ಆರಂಭಗೊಳ್ಳಲಿದೆ. ನಗರಕ್ಕೆ ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನಗರಸಭೆಯ ಎಲ್ಲ ಸಿಬ್ಬಂದಿ ರಾಂಪುರ ಕೆರೆಗೆ ಭರ್ತಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆಂದು ನಗರಸಭೆಯ ಪೌರಾಯುಕ್ತ ಮಂಜುನಾಥ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈ ಮಧ್ಯೆ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ನಾಗರಾಜು ಅವರೂ ಗಣೇಕಲ್ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿಂದ ತುಂಗಭದ್ರಾ ಎಡದಂಡೆ ಮೂಲಕ ರಾಂಪುರ ಕೆರೆಗೆ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಅಷ್ಟೇ ಅಲ್ಲ ಅವರು ರಾಂಪುರ ಕೆರೆ ಪ್ರದೇಶಕ್ಕೆ ತೆರಳಿ ಎಡದಂಡೆ ಕಾಲುವೆಯಲ್ಲಿ ತಲುಪಿದ ನೀರಿನ ಮೇಲೆತ್ತುವ ಕಾರ್ಯ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಬೇಸಿಗೆಯಲ್ಲಿ ಉಂಟಾಗಬಹುದಾಗಿದ್ದ ನೀರಿನ ತೀವ್ರ ಅಭಾವದಿಂದ ನಗರದ ಜನತೆ ಸದ್ಯಕ್ಕೆ ಪಾರಾಗಿದ್ದಾರೆ. ದಿನವೂ ನೀರು ದೊರೆಯುವುದೆಂಬ ನಿರೀಕ್ಷೆಯಲ್ಲಿದ್ದಾರೆ.