ರೇಲ್ವೆ ಬಜೆಟ್ 2013 ಜನ ಏನಂತಾರೆ?
ಜಿಲ್ಲೆಗೆ ಹೊಸದೇನೂ ಕೊಟ್ಟಿಲ್ಲ. ಜಾರಿಯಲ್ಲಿರುವ ಯೋಜನೆಗಳಿಗೆ ಅಷ್ಟಿಷ್ಟು ದೊರೆಯಬಹುದು. ನಿರಾಶಾದಾಯಕ ಬಜೆಟ್ ಇದು. ದಶಕಗಳಿಂದ ಜಾರಿಯಲ್ಲಿರುವ ಯೋಜನೆಗಳತ್ತ ಗಮನವಿಲ್ಲ. ನಿರಾಸೆ ತಂದಿದೆ.
- ಸಣ್ಣಫಕೀರಪ್ಪ, ಸಂಸದ, ರಾಯಚೂರು.
ಈ ಭಾಗದ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಹಳಸಲು ಯೋಜನೆಗಳನ್ನೇ ಮತ್ತೆ ಪ್ರಸ್ತಾಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ವಿಷಯ ಪ್ರಸ್ತಾಪಿಸಿಲ್ಲ.
- ತ್ರಿವಿಕ್ರಮ್ ಜೋಷಿ, ರಾಯಚೂರು.
ಗದಗ-ವಾಡಿ ರೈಲ್ವೆ ಮಾರ್ಗ ಪುನಾ ಸೇರ್ಪಡೆ ಅಲ್ಪ ಸಮಾಧಾನ ತಂದಿದೆ. ಈ ಭಾಗಕ್ಕೆ ಗಮನ ಅಷ್ಟಕ್ಕಷ್ಟೇ. ಕೇಂದ್ರದ ಮೇಲೆ ಜನಸಂಗ್ರಾಮ ಪರಿಷತ್ತಿನಿಂದ ಒತ್ತಡ ಹೇರಿದ್ದರಿಂದ ಗದಗ-ವಾಡಿ ಸೇರ್ಪಡೆಯಾಗಿದೆ.
- ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್
ಹೈ- ಕ ಭಾಗದ ಜನರ ಬಹುದಿನದ ಕನಸಾದ ಗದಗ- ವಾಡಿ ರೇಲ್ವೆ ಯೋಜನೆಗೆ ಕೇಂದ್ರದ ರೇಲ್ವೆ ಸಚಿವರು ಬಜೆಟ್ನಲ್ಲಿ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ.
- ಪಾಮಯ್ಯ ಮುರಾರಿ, ಜಿಪಂ ಮಾಜಿ ಉಪಾಧ್ಯಕ್ಷರು, ಲಿಂಗಸ್ಗೂರು
ಹೈ-ಕ ಹಿರಿಯ ನಾಯಕರು ಪ್ರಧಾನಮಂತ್ರಿ ಬಳಿ ನಿಯೋಗ ತೆರಳಿ ರೇಲ್ವೆ ಮಾರ್ಗಗಳ ಆರಂಭಿಸಲು ಮನವಿಗೆ ಸ್ಪಂದಿಸಿ ಗದಗ-ವಾಡಿ ರೇಲ್ವೆ ಮಾರ್ಗ ಆರಂಭಕ್ಕೆ ಬಜೆಟ್ನಲ್ಲಿ ಹಸಿರು ನಿಶಾನೆ ತೋರಿದೆ.
- ಶರಣಪ್ಪ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಸ್ಗೂರು.
ಮುನಿರಾಬಾದ್ ಮಹಿಬೂಬನಗರ ರೇಲ್ವೆ ಯೋಜನೆ ನೆನೆಗುದಿಗೆ ಬಿದ್ದಂತೆ ನೆಪಮಾತ್ರಕ್ಕೆ ಆಗಬಾರದು. ಕೂಡಲೇ ಕಾರ್ಯೋನ್ಮುಖರಾಗಿ ರೈತರ ಜಮೀನುಗಳಿಗೆ ಯೋಗ್ಯ ಬೆಲೆ ನೀಡಿ ಭೂಮಿ ಖರೀದಿಸಿ ಕೆಲಸ ಆರಂಭಿಸಬೇಕು.
- ಎಚ್.ಬಿ. ಮುರಾರಿ,
ಜಿಪಂ ಸದಸ್ಯ ಲಿಂಗಸ್ಗೂರು.
ರೇಲ್ವೆ ಬಜೆಟ್ ಜನಸ್ನೇಹಿ ಬಜೆಟ್ ಆಗಿದೆ. ಈ ಬಾರಿ ರೈಲುಗಳಲ್ಲಿ ಉಪಾಹಾರ ಸುಧಾರಣೆಗೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸಿರುವುದು ಕಾಂಗ್ರೆಸ್ ಪಕ್ಷದ ಸಾಧನೆ.
- ಹಂಪನಗೌಡ ಬಾದರ್ಲಿ,
ಮಾಜಿ ಶಾಸಕ, ಸಿಂಧನೂರು.
ರೇಲ್ವೆ ಬಜೆಟ್ನಲ್ಲಿ ಮುನಿರಾಬಾದ್ ಮಹಿಬೂಬನಗರ ರೇಲ್ವೆಗೆ ಆದ್ಯತೆ ನೀಡಿಲ್ಲ. ಈ ಭಾಗದ ಜನರ ಕನಸು ನುಚ್ಚುನೂರಾಗಿದೆ. ಬನ್ಸಾಲ್ ಬಜೆಟ್ ಜನಪರವಾಗಿಲ್ಲ. ರಾಜ್ಯಕ್ಕೆ ನಿರಾಶೆ ಮೂಡಿಸಿದೆ.
- ಕೆ.ವಿರೂಪಾಕ್ಷಪ್ಪ,
ಮಾಜಿ ಸಂಸದ
ರೈಲು ಬೋಗಿಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ಸುರಕ್ಷತೆ ದೃಷ್ಟಿಯಿಂದ ಭಾರತೀಯ ರೇಲ್ವೆ ಕಳ್ಳತನಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮುಂದಾಗಿರುವುದು ಸಂತಸ ತಂದಿದೆ.
- ಹನುಮನಗೌಡ ಬೆಳಗುರ್ಕಿ
ರೈತ ಮುಖಂಡರು, ಸಿಂಧನೂರು
ಈ ಬಾರಿ ರೇಲ್ವೆ ಸಚಿವರು ಮಂಡಿಸಿದ ಬಜೆಟ್ನಲ್ಲಿ ನೂರು ಹೊಸ ರೈಲುಗಳನ್ನು ಆರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ. ಪ್ರಯಾಣದ ದರ ಏರಿಕೆ ಜನಸಾಮಾನ್ಯರಿಗೆ ಅಷ್ಟೊಂದು ಭಾರವಾಗಿಲ್ಲ.
- ವೀರೇಶ ಸಜ್ಜನ,
ಯುವ ಕವಿ, ಸಿಂಧನೂರು.