ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆರ್ ಟಿಇ: ಖಾಸಗಿ ಸಂಸ್ಥೆಗಳಿಗೆ ಕೋಟಿ ರು. ಬಾಕಿ

Rashmi Kasaragodu
Updated On : 28 Feb 2013, 12:02 pm

ರಾಯಚೂರು:  ರಾಜ್ಯ ಸರ್ಕಾರ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯ ಸಮರ್ಪಕ ಜಾರಿಗೆ ಒಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಿರಂತರ ಒತ್ತಡ ಹೇರುತ್ತಿದೆ.
ಆದರೆ ಅದೇ ಮತ್ತೊಂದೆಡೆ ಆ ಸಂಸ್ಥೆಗಳಿಗೆ ಕಾಯಿದೆ ಅಡಿ ನೀಡಬೇಕಾದ ಅನುದಾನ ಬಿಡುಗಡೆ ಮಾಡದಿರುವುದು ಆಯಾ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಪ್ರವೇಶ ನೀಡಲು ನಿರಾಕರಿಸುವಂಥ ಸ್ಥಿತಿ ನಿರ್ಮಾಣ ಮಾಡಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ ಖಾಸಗಿ ಸಂಸ್ಥೆಗಳು ಈಗ ಅಕ್ಷರಶಃ ಗೊಂದಲಕ್ಕೆ ಬಿದ್ದಿವೆ.
ಇಂದಲ್ಲ ನಾಳೆ ಸರ್ಕಾರದಿಂದ ಅನುದಾನ ದೊರೆಯುವುದೆಂಬ ನಿರೀಕ್ಷೆ ಸುಳ್ಳಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಯಿದೆಯಂತೆ ಪ್ರವೇಶ ನೀಡಲು ಹಿಂದೇಟು ಹಾಕುವಂತಾಗಿದೆ.
ಆರೋಪ: ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆ ಅಡಿ ಕಳೆದ ವರ್ಷ ಜಿಲ್ಲೆಯಲ್ಲಿ 1620 ವಿದ್ಯಾರ್ಥಿಗಳಿಗೆ ಸರ್ಕಾರದ ಅನುದಾನಿತ ಖಾಸಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಪಾಲಕರು ಫುಲ್ ಖುಷ್ ಆಗಿದ್ದಾರೆ. ಆದರೆ ಸರ್ಕಾರ 1620 ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕೆ ಪ್ರತಿಯಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರದ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯಂತೆ 2011-12ನೇ ಸಾಲಿನಲ್ಲಿ ಶೇ. 25ರಷ್ಟು ಸೀಟುಗಳನ್ನು ನೀಡಿರುವ ಸಂಸ್ಥೆಗಳಿಗೆ ಸರ್ಕಾರದಿಂದ ರು. 1.21 ಕೋಟಿ ಬಾಕಿ ಬರಬೇಕಿದೆ.
 ಈ ಬಗ್ಗೆ ಹತ್ತಾರು ಬಾರಿ ಶಿಕ್ಷಣ ಸಂಸ್ಥೆಗಳ ಪ್ರಮುಖರು ಡಿಡಿಪಿಐ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದು, ಇದುವರೆಗೆ ಅನುದಾನ ಮಾತ್ರ ಮಂಜೂರಾಗಿಲ್ಲ ಎಂಬ ದೂರು ಕೇಳಿಬಂದಿದೆ. ಇದರಿಂದ ಸಂಸ್ಥೆಗಳ ಮುಖ್ಯಸ್ಥರು ಆತಂಕಕ್ಕೆ ಸಿಲುಕಿದ್ದಾರೆ.
ಹಣ ಬಿಡುಗಡೆಯಾಗಿಲ್ಲ: ಆರ್‌ಟಿಇ ನಿಯಮದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ವಿದ್ಯಾರ್ಥಿಗೆ ಇಂತಿಷ್ಟು ಮೊತ್ತವನ್ನು ಶಿಕ್ಷಣ ನೀಡಿಕೆಗೆ ಪ್ರತಿಯಾಗಿ ನೀಡಬೇಕಿದೆ. ಆದರೆ ಒಮ್ಮೆಯೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.
ದೇವದುರ್ಗ ತಾಲೂಕಿನ 134, ಲಿಂಗಸ್ಗೂರು-243, ಮಾನವಿಯ 295, ರಾಯಚೂರಿನ 407 ಹಾಗೂ ಸಿಂಧನೂರು ತಾಲೂಕಿನಲ್ಲಿ 181 ವಿದ್ಯಾರ್ಥಿಗಳು ಈ ಕಾಯಿದೆಯಡಿ ಪ್ರವೇಶ ಪಡೆದಿದ್ದಾರೆ. ಹೀಗೆ ಕಾಯಿದೆ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವಾದ ರು. 1.21ಕೋಟಿ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ಶಿಕ್ಷಣ ಸಂಸ್ಥೆಗಳಿಗೆ ಸಂಕಷ್ಟ ತಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ರೆಡ್ಡಿ, ಆರ್ ಟಿಇ ಅಡಿ ಪ್ರವೇಶ ನೀಡಿದ ಮಕ್ಕಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
2 ಕಂತುಗಳಲ್ಲಿ ಹಣ: ಈ ಹಿಂದೆ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಿದಾಗ 2 ಕಂತುಗಳಲ್ಲಿ ಹಣ ಬಿಡುಗಡೆಯ ಭರವಸೆ ಕೊಡಲಾಗಿತ್ತು. ಆದರೆ ಆನಂತರದಲ್ಲಿ ಸರ್ಕಾರ ಈ ವಿಚಾರವನ್ನೇ ಮರೆತಂತಿದೆ. ಒಂದೆಡೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆ ಸಮರ್ಪಕ ಜಾರಿಗೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ.
ಅದೇ ಮತ್ತೊಂದೆಡೆ ಈ ಕಾಯಿದೆ ಅಡಿ ಪ್ರವೇಶ ಮುಂದಿನ ಶೈಕ್ಷಣಿಕ ವರ್ಷಕ್ಕೆ ನೀಡಬೇಕೋ ಎಂಬ ಗೊಂದಲದಲ್ಲಿ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಪಾಲಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಪ್ರವೇಶ ದೊರೆಯುವ ಬಗ್ಗೆ ಪಾಲಕರು ಆತಂಕದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement