ಡಿಡಿಪಿಐ ವಿರುದ್ಧ ಕ್ರಮಕ್ಕೆ ಆಗ್ರಹ
ರಾಯಚೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಡಿಡಿಪಿಐ (ಡೆಪ್ಯುಟಿ ಡೈರೆಕ್ಟರ್ ಆಫ್ ಪಬ್ಲಿಕ್ ಇನ್ಸ್ಟ್ರಕ್ಷನ್) ಅವರು ಈ ನಿಟ್ಟಿನಲ್ಲಿ ಕೈಗೊಂಡಿರುವ ತಪ್ಪು ನಿರ್ಧಾರದ ಬಗ್ಗೆ ತನಿಖೆ ಕೈಗೊಳ್ಳುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುಮಾರ ನಾಯಕ ಅವರಿಗೆ ಬುಧವಾರ ಮನವಿ ಸಲ್ಲಿಸಿ, ಡಿಡಿಪಿಐ ಪರಮೇಶ್ವರ ಅವರು 2012ರ ಡಿ. 28ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ಅಕ್ರಮ ಎಸಗಿದ್ದಾರೆ.
ಸೇವಾ ಜೇಷ್ಠತೆ ಹೊಂದಿದ ಹಿರಿಯ ಶಿಕ್ಷಕರನ್ನು ಕಡೆಗಣಿಸಿ ಬಡ್ತಿಗೆ ಅನರ್ಹಗೊಳಿಸಿದ್ದಾರೆಂದು ಟೀಕಿಸಿದರು.
ಅನ್ಯಾಯ: ಡಿಡಿಪಿಐ ಅವರು ತಮಗೆ ಅನುಕೂಲವಾಗಿರುವ ಹಾಗೂ ಸೇವಾ ಜೇಷ್ಠತೆ ಹೊಂದಿರದ ಕಿರಿಯ ಶಿಕ್ಷಕರಿಗೆ ಸೇವಾ ಮುಂಬಡ್ತಿಯನ್ನು ನೀಡುವ ಮೂಲಕ ಅನ್ಯಾಯ ಮಾಡಿದ್ದಾರೆ.
ಬಡ್ತಿ ಪಡೆದವರು ವಿವಿಧ ಷರತ್ತುಗಳನ್ನು ಪಾಲಿಸಿಲ್ಲ. ಗಳಿಕೆ ರಜೆಯನ್ನು ಪಡೆದಿದ್ದಾರೆ. ಬಡ್ತಿಗೆ ಸಂಬಂಧಿಸಿ 2006ರ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.
ಬಡ್ತಿಯಿಂದ ವಂಚನೆ: ರೆಗ್ಯುಲರ್ ಬಿಇಡಿ ಪದವಿ ಪಡೆಯಲು ತೆರಳಿದ ಶಿಕ್ಷಕರು ಕಚೇರಿ ನಿಯಮದಂತೆ ನಡೆದುಕೊಂಡಿದ್ದು, ಯಾವುದೇ ತಪ್ಪೆಸಗಿಲ್ಲ. ಬಿಇಒ ಮಾಡಿದ ತಪ್ಪನ್ನು ಜಿಲ್ಲೆಯಲ್ಲಿ ಶಿಕ್ಷಕರ ಮೇಲೆ ಹೊರಿಸಲಾಗುತ್ತಿದೆ. ಆ ಮೂಲಕ ಶಿಕ್ಷಕರನ್ನು ಬಡ್ತಿಯಿಂದ ವಂಚಿತರಾಗಿಸಲಾಗಿದೆ ಎಂದು ದೂರಿದರು. ಎಲ್ಲ ಶಿಕ್ಷಕರನ್ನೂ ಸೇವಾ ಜೇಷ್ಠತೆ ಆಧರಿಸಿ ಬಡ್ತಿಗೆ ಪರಿಗಣಿಸಬೇಕು. ಸದ್ಯ ಡಿಡಿಪಿಐ ಅಕ್ರಮದಿಂದಾಗಿ ಬಡ್ತಿ ವಂಚಿತರಾಗಿರುವವರಿಗೂ ಕೂಡಲೇ ಬಡ್ತಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ ಅವರು, ಈ ಬಗ್ಗೆ ಡಿಡಿಪಿಐ ಅವರ ವಿರುದ್ಧ ಮೇಲಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲ.
ಕಾರಣ ಕೂಡಲೇ ಹಿರಿಯ ಶಿಕ್ಷಕರಿಗೆ ಬಡ್ತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಡಿಡಿಪಿಐ ಅವರು ಕೈಗೊಂಡ ತಪ್ಪು ನಿರ್ಧಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ. ತಿಮ್ಮಣ್ಣ ಮತ್ತು ಸಂಘದ ಸದಸ್ಯರು ಇದ್ದರು.