ಮಾಜಿ ಸಚಿವ ಕಾಂತಾ ಜೆಡಿಎಸ್‌ಗೆ ರಾಜಿನಾಮೆ
ಗುಲ್ಬರ್ಗ: ಮಾಜಿ ಸಚಿವ, ಹೋರಾಟಗಾರ ಎಸ್.ಕೆ. ಕಾಂತಾ ಜೆಡಿಎಸ್‌ಗೆ ರಾಜಿನಾಮೆ ನೀಡಿದ್ದಾರೆ. ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ದೇವೇಗೌಡರಿಗೆ ಕಳುಹಿಸಿದ್ದಾರೆ. ಜೆಡಿಎಸ್ ಸಂಸದೀಯ ಮಂಡಳಿ ಸದಸ್ಯ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾಗಿ ಕಾಂತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ ಪಕ್ಷದ ಪರವಾಗಿ ಬಿ ಫಾರ್ಮ್ ಹಂಚಿಕೆ ವಿಷಯದಲ್ಲಿ ತಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದ ಕಾಂತಾ, ತಮ್ಮ ರಾಜಿನಾಮೆ ಪತ್ರದಲ್ಲಿಯೂ ಪ್ರಸ್ತಾಪಿಸಿದ್ದಾರೆ.
ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದಿರುವ ಕಾಂತಾ ಕಳೆದ ಅನೇಕ ವರ್ಷಗಳಿಂದ ದಳ ಪರಿವಾರದಲ್ಲಿದ್ದರು.
ತಮ್ಮ ಜನಪರ ಕಾಳಜಿ, ಹೋರಾಟಗಳಿಂದಾಗಿ ಹೆಸರಾಗಿದ್ದ ಕಾಂತಾ ಅವರ ಉಪಸ್ಥಿತಿಯೇ ಜೆಡಿಎಸ್‌ಗೆ ಜಿಲ್ಲೆಯಲ್ಲಿ ಒಂದು ವಿಧದಲ್ಲಿ ಕಿಮ್ಮತ್ತು ತಂದುಕೊಟ್ಟಿತ್ತು.
ಇದೀಗ ಕಾಂತಾ ಅವರ ರಾಜಿನಾಮೆ ಪ್ರಕರಣ ಆ ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ತಾವು ಈಗ ನೀಡಿರುವ ರಾಜಿನಾಮೆಯನ್ನು ವಾಪಸ್ ಪಡೆಯಲಾಗದು ಎಂದೂ ಕಾಂತಾ ಅವರು ಈ ಸಂದರ್ಭದಲ್ಲಿ ಸ್ಪಷ್ಪಪಡಿಸಿದ್ದಾರೆ.