ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿವರಾತ್ರಿಗೂ ಮೊದಲೇ ಶಿವ ಶಿವಾ...

Rashmi Kasaragodu
Updated On : 28 Feb 2013, 12:13 pm

 ವಿಶೇಷ ವರದಿ
ಯಾದಗಿರಿ: ಈ ಬಾರಿ ಸುಡು ಬಿಸಿಲು ಶಿವರಾತ್ರಿಗೂ ಮೊದಲೇ ಆರಂಭವಾಗಿದೆ. ಖಡಕ್ ಬಿಸಿಲಿನ ಹೊಡೆತಕ್ಕೆ ಸಾರ್ವಜನಿಕರು ಈಗಲೇ ಉಷ್.. ಎನ್ನುತ್ತಿದ್ದು, ಮುಂದೆ ಹೇಗಪ್ಪಾ ಕಾಲ.. ಎಂಬ ಉದ್ಘಾರ ತೆಗೆಯುತ್ತಿದ್ದಾರೆ.
- ಹೌದು. ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೂರ್ಯ ಕಣ್ ಬಿಡುವುದೇ ತಡ, ಬಿಸಿಲೂ ಆರಂಭವಾಗುತ್ತದೆ. ಸಂಜೆ ಸೂರ್ಯ ಮುಳುಗುವವರೆಗೂ ಇದೇ ಅನುಭವ. ಅದರಲ್ಲೂ ನಡು ಮಧ್ಯಾಹ್ನದ ವೇಳೆಯಂತೂ ನೆರಳಿನಿಂದ ಹೊರಬರುವುದೇ ಬೇಡ. ಸುಡು ಬಿಸಿಲಿನ ತಾಪ ತಣಿಸಿಕೊಳ್ಳಲು ಯಾವ ಉಪಾಯ ಮಾಡಿದರೂ ಪರಿಣಾಮ ಬೀರದು.
ಎರಡು ದಿನ ಈ ಪ್ರಖರ ಬಿಸಿಲಲ್ಲಿ ಹೋಗಿ ಬಂದರೆ ಸಾಕು, ಮೈಯೆಲ್ಲ ಸುಟ್ಟಂತಾಗುತ್ತಿದೆ. ಇನ್ನೂ ಮಾರ್ಚ್ ತಿಂಗಳ ಆರಂಭವಾಗಿಲ್ಲ. ಹೆಚ್ಚಿನ ಬೇಸಿಗೆ ದಿನಗಳು ಮುಂದಿವೆ. ಏಪ್ರಿಲ್, ಮೇ ತಿಂಗಳಲ್ಲಿ ಈ ವರ್ಷ ಕಷ್ಟ ಕಷ್ಟ.. ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಉಷ್.. ಯಾಪಾಟಿ ಬಿಸಿಲೋ.. ಈಗ್ಲೇ ಹೀಂಗಾದ್ರೆ ಇನ್ನೂ ಮೂರು ತಿಂಗ್ಳು ಕಾಲಾ ಕಳೆಯೋದ ಹೆಂಗೋ ಏನೋ.. ಎಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿಬರುತ್ತಿದೆ. ಕಳೆದ ಒಂದು ವಾರದಿಂದ ಈ ರೀತಿಯ ಚುರ್ ಎನ್ನುವ ಬಿಸಿಲು ಹಾಗೂ ಸೆಕೆ ಆರಂಭವಾಗಿದೆ. ಮನೆಯಿಂದ ಹೊರಕ್ಕೆ ಕಾಲಿಟ್ಟ ತಕ್ಷಣ ಬಿಸಿಲಿನ ಅನುಭವವಾಗುತ್ತಿದೆ.
ಈ ವರ್ಷ ಜಾಸ್ತಿ: ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಬಿಸಿಲಿನ ತಾಪ ಇನ್ನಷ್ಟು ಜೋರಾಗಿದೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿಯ ಬಿಸಿಲ ಅನುಭವವಿರುವ ಸ್ಥಳೀಯರೇ ಈ ಸಲದ ಬಿಸಿಲಿಗೆ ಅಂಜುತ್ತಿದ್ದಾರೆ. ಇನ್ನು ಬೇರೆ ಕಡೆಯಿಂದ ಬರುವವರ ಸ್ಥಿತಿಯಂತೂ ಹೇಳತೀರದು. ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದಂತೆ ತಾಪಮಾನವೂ ಹೆಚ್ಚಾಗುತ್ತಿದೆ. ಬಿಸಿಲಿನಲ್ಲಿ ಹೊರಗೆ ಹೋಗಲಾಗುವುದಿಲ್ಲ, ಒಳಗೆ ಸೆಕೆಯಿಂದ ಕುಳಿತುಕೊಳ್ಳಲಾಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ.
ಮಧ್ಯಾಹ್ನವಾಗುತ್ತಿದ್ದಂತೆ ಬಿಸಿ ಗಾಳಿ ಜೋರಾಗುತ್ತಿದ್ದು, ಬೆಂದ ಅನುಭವವಾಗುತ್ತಿದೆ. ಈ ಸಲ ಮಳೆ ಅಭಾವದಿಂದ ವಾತಾವರಣದಲ್ಲಿ ತೇವಾಂಶದ ಕೊರತೆಯೂ ಇದೆ. ಆದ್ದರಿಂದ ಮ.12ರಿಂದ 4 ಗಂಟೆವರೆಗಿನ ಸಮಯದಲ್ಲಿ ಬಿಸಿಲಲ್ಲಿ ಹೋಗುವುದೇ ಕಷ್ಟವಾಗುತ್ತಿದೆ. ಬೈಕ್‌ಗಳಲ್ಲಿ ಹೋಗುತ್ತಿದ್ದರೂ ಮೈಕೈ ಸುಡುವಂಥ ಅನುಭವವಾಗುತ್ತಿದೆ. ಈಗಾಗಲೇ ತಾಪಮಾನದಲ್ಲಿ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವುದು ನಿಶ್ಚಿತ.
ಹಣ್ಣು, ಮಡಕೆ ಮಾರಾಟ ಜೋರು: ಶಿವರಾತ್ರಿ ನಂತರ ಶಿವ ಶಿವಾ.. ಎನ್ನುವಷ್ಟು ಬಿಸಿಲು ಏರುತ್ತದೆ ಎಂಬ ಈ ಭಾಗದ ಮಾತು ಸತ್ಯವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ನೆರಳಿಗೆ ಮರವಾದರೂ ಕಾಣುತ್ತದೆ. ಆದರೆ ನಗರಕ್ಕೆ ಬಂದರೆ ಬಿಸಿಲಿನ ಹೊಡೆತಕ್ಕೆ ತಲೆ ಚಕ್ರ ಬಂದರೂ ಕುಳಿತುಕೊಳ್ಳಲು ನೆರಳು ಸಿಗದು. ಬಿಸಿಲು, ಸೆಕೆಯಿಂದ ರಕ್ಷಣೆ ಪಡೆಯಲು ಏನೆಲ್ಲ ಕಸರತ್ತು ಮಾಡಿದರೂ ಸಾಲುತ್ತಿಲ್ಲ. ಆದ್ದರಿಂದ ದೇಹಕ್ಕೆ ತಂಪು ನೀಡುವ ಹಣ್ಣು, ಜ್ಯೂಸ್, ಎಳನೀರು ಮಾರಾಟ ಜೋರಾಗಿದೆ.
ನಗರದಲ್ಲಿ ಅಲ್ಲಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ಕಂಡುಬರುತ್ತಿದೆ. ಇಂದು ರಾಶಿ ಹಾಕಿಟ್ಟದ್ದು ನಾಳೆ ಖಾಲಿ ಎಂಬಂತೆ ಮಾರಾಟವಾಗುತ್ತಿದೆ. ಎಳನೀರು, ಜ್ಯೂಸ್ ಅಂಗಡಿಗಳಿಗೂ ಜನ ಮುಗಿಬೀಳುತ್ತಿದ್ದಾರೆ. ಅದೇ ರೀತಿ ಬಡವರ ಫ್ರಿಡ್ಜ್ ಎಂದೇ ಕರೆಯುವ ಮಡಕೆ ಮಾರಾಟವೂ ಜೋರಾಗಿದೆ. ದೊಡ್ಡ ಗಾತ್ರದ ಮಡಕೆಗೆ ಭಾರೀ ಬೇಡಿಕೆ ಬಂದಿದೆ. ಮಡಕೆಯಲ್ಲಿಟ್ಟ ತಂಪಾದ ನೀರನ್ನು ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದಾರೆ.
ಕಾಲ ಭಯಂಕರ: ಸದ್ಯ ಕುಡಿವ ನೀರಿಗೆ ಹಾಹಾಕಾರ ಏಳದಿದ್ದರೂ ಮುಂದಿನ ಮೂರು ತಿಂಗಳಲ್ಲಿ ಈ ಪರಿಸ್ಥಿತಿ ಬರುವ ಸಾಧ್ಯತೆಯಿದೆ. ಆದ್ದರಿಂದ ಕುಡಿವ ನೀರಿಗೆ ತೊಂದರೆ ಆಗದ ರೀತಿಯಲ್ಲಿ ಜಿಲ್ಲಾಡಳಿತ ಮುಂಚಿತವಾಗಿ ಕ್ರಮ ಕೈಗೊಳ್ಳಬೇಕಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಉದ್ಭವಿಸುವ ಸಾಧ್ಯತೆ ಇದೆ. ಬಾನಿನಿಂದ ಕೆಂಡ ಉದುರುತ್ತಿರುವ ಅನುಭವವಾದರೂ ತಾಳಿಕೊಳ್ಳಬೇಕು. ಈ ವರ್ಷವಾದರೂ ಮುಂಗಾರು ಬೇಗ ಆರಂಭವಾಗಿ ವಾತಾವರಣ ಸರಿಹೋಗಲಿ ಎಂದು ದೇವರಲ್ಲಿ ಮೊರೆ ಹೋಗುವುದೊಂದೇ ಜನರಿಗೆ ಇರುವ ಮಾರ್ಗವಾಗಿದೆ.
ಸಾಮಾನ್ಯವಾಗಿ ಶಿವರಾತ್ರಿ ಮುಗಿದ ನಂತರ ಬಿಸಿಲ ಪ್ರಖರತೆ ಜಾಸ್ತಿಯಾಗುತ್ತದೆ ಎಂದು ವಾಡಿಕೆಯ ಅನುಭವದ ಮೇಲೆ ಹಿರಿಯರು ಹೇಳುತ್ತಾರೆ. ಆದರೆ ಈ ಲೆಕ್ಕಾಚಾರವೆಲ್ಲ ಈಗ ತಲೆಕೆಳಗಾಗುತ್ತಿದೆ. ಶಿವರಾತ್ರಿಗೆ ಇನ್ನೂ 15 ದಿನ ಇರುವಾಗಲೇ ಬಿಸಿಲು ಜೋರಾಗಿದೆ. ಎರಡು ವರ್ಷಗಳಿಂದ ಮುಂಗಾರು ಮಳೆ ಇಲ್ಲದೇ ಬರ ಪರಿಸ್ಥಿತಿ ಎದುರಿಸಿದ್ದರಿಂದ ಬಿಸಿಲ ತಾಪ ಹೆಚ್ಚಾಗಿರುವ ಸಾಧ್ಯತೆಯಿದೆ. ಬೇಸಿಗೆಯ ಭಯಂಕರ ದಿನಗಳು ಮುಂದೆ ಎದುರಾಗಲಿದ್ದು, ಅದನ್ನು ಎದುರಿಸಲು ಸಜ್ಜಾಗುವುದೊಂದೇ ಉಳಿದ ಉಪಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement