ಸಮರ್ಪಕ ಜಾರಿಗೆ ಸೂಚನೆ
ರಾಯಚೂರು: ನಗರದ ಡಿಡಿಪಿಐ ಕಚೇರಿಯಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುಮಾರನಾಯಕ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯ ಸಮರ್ಪಕ ಜಾರಿಗೆ ಇಲಾಖೆಯ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಶೇ.25 ರಷ್ಟು ಸೀಟುಗಳ ಪ್ರವೇಶ ನೀಡುವ ನಿಟ್ಟಿನಲ್ಲಿ ನಿಗಾಯಿರಿಸುವಂತೆ ಆದೇಶಿಸಿದರು.
ಅಧಿಕಾರಿಗಳು ಸಭೆಯಲ್ಲಿ ಮಾತನಾಡಿ, 2011- 12ನೇ ಸಾಲಿನಲ್ಲಿ ಒಟ್ಟು 1,620 ವಿದ್ಯಾರ್ಥಿಗಳಿಗೆ ಕಾಯಿದೆ ಅಡಿ ಪ್ರವೇಶ ನೀಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರನಾಯಕ ಅವರು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಶೇ.25ರಷ್ಟು ಸೀಟು ಕಡ್ಡಾಯವಾಗಿ ಆರ್ಟಿಇ ಕಾಯಿದೆಯಂತೆ ಪ್ರವೇಶ ನೀಡಲು ಗಮನಹರಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯ ಕಲ್ಪಿಸದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಶೈಕ್ಷಣಿಕ ವರ್ಷದಾರಂಭಕ್ಕೂ ಮುನ್ನವೇ ಮೂಲಸೌಲಭ್ಯ ಕಲ್ಪಿಸಲು ಆದೇಶಿಸಿ, ಮುಂದಿನ ಅವಧಿಗೆ ಬೇಕಾಗುವ ಪಠ್ಯಪುಸ್ತಕ, ಶಿಕ್ಷಣಕ್ಕೆ ಅಗತ್ಯವಾದ ಹಲವಾರು ಸಾಮಗ್ರಿಗಳ ಬಗ್ಗೆ ತಾಲೂಕುವಾರು ಮಾಹಿತಿ ಪಡೆದರು.
ಸಭೆಯಲ್ಲಿ ಡಿಡಿಪಿಐ ಪರಮೇಶ್ವರ್ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ತಾಲೂಕುಗಳ ಅಧಿಕಾರಿಗಳು ಇದ್ದರು.