ಕುಡಿವ ನೀರು ಪೂರೈಕೆ: ಶಾಸಕರ ಸೂಚನೆ
ರಾಯಚೂರು: ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಅಗತ್ಯವಿರುವ ನೀರನ್ನು ಗಣೇಕಲ್ ಜಲಾಶಯದಲ್ಲಿ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಸೈಯದ್ ಯಾಸೀನ್ ಸೂಚಿಸಿದರು.
ಅವರು ಈಚೆಗೆ ಮುನಿರಾಬಾದ್ನ ನೀರಾವರಿ ಇಲಾಖೆಯ ಕಚೇರಿಗೆ ತೆರಳಿ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ ಜತೆ ಚರ್ಚಿಸಿ, ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತವಾಗುವಂತೆ ತಿಳಿಸಿದರು.
ಸದ್ಯ ಗಣೇಕಲ್ ನಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದು, ಮಾರ್ಚ್ ನಲ್ಲಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಯುವುದು ಸ್ಥಗಿತಗೊಳ್ಳುವುದಕ್ಕೂ ಮುನ್ನ ಗಣೇಕಲ್ ಜಲಾಶಯದಲ್ಲಿ ಕನಿಷ್ಟ 20ಅಡಿ ನೀರು ಸಂಗ್ರಹಿಸಿದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗದು ಎಂದು ಮನವರಿಕೆ ಮಾಡಿದರು.
ರಾಯಚೂರು ಸೇರಿದಂತೆ ಸುತ್ತಲಿನ 25ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡುವ ಅವಶ್ಯಕತೆಯಿದ್ದು, ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ವಿನಾ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಶ್ರಮಿಸುವಂತೆ ಹೇಳಿದರು.