ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚುನಾವಣೆ; ಮದ್ಯ ವಹಿವಾಟು ಭರ್ಜರಿ

Rashmi Kasaragodu
Updated On : 1 Mar 2013, 10:59 am

ವಿಶೇಷ ವರದಿ
ರಾಯಚೂರು: ವಿಧಾನಸಭೆ ಮತ್ತು ಲೋಕಸಭೆಗೆ ಚುನಾವಣೆಯ ಕಾಲದಲ್ಲಿ ಹಣ, ಮದ್ಯ ಹಂಚಿಕೆ ತೀರಾ ಸಾಮಾನ್ಯ. ಆದರೆ ನಗರ ಮತ್ತು ಸ್ಥಳೀಯ ಸಂಸ್ಥೆಗೆ ಮಾ.7ರಂದು ನಡೆಯವಿರುವ ಚುನಾವಣೆಯಲ್ಲಿ ಈ ಎರಡೂ ಚುನಾವಣೆಗಳಷ್ಟೇ ಹಣ ಮತ್ತು ಮದ್ಯದ ಹೊಳೆ ಹರಿಸುತ್ತಿವೆ ಎಂಬುದು ಮದ್ಯದ ಭರ್ಜರಿ ವಹಿವಾಟಿನಿಂದ ಕಂಡುಬಂದಿದೆ.
ನಗರ ಮತ್ತು ಜಿಲ್ಲೆಯ ವಿವಿಧೆಡೆ ನಡೆಯಲಿರುವ ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗೆ ಈಗಿನಿಂದಲೇ ಹಣದ ಹಂಚಿಕೆ ಹಾಗೂ ಮದ್ಯದ ಆಮಿಷಗಳು ಭರ್ಜರಿಯಾಗೇ ನಡೆದಿದ್ದು, ಮತದಾರರ ಓಲೈಕೆಗೆ ಎಲ್ಲ ಕಸರತ್ತು ನಡೆಸಿರುವ ಅಭ್ಯರ್ಥಿಗಳು ಮದ್ಯದ ಭಾರೀ ವಹಿವಾಟಿಗೆ ಮುಂದಾಗಿರುವುದು ಸ್ಪಷ್ಟವಾಗಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧ ಮದ್ಯ ಮಾರಾಟ ಮಳಿಗೆಗಳಿಗೆ ರಾಜ್ಯ ಸರ್ಕಾರದ ಪಾನೀಯ ಮಂಡಳಿಯಿಂದ ಮಾರಾಟವಾದ ಮದ್ಯದ ಪ್ರಮಾಣವು ಬೆಚ್ಚಿಬೀಳಿಸುವಂತಿದೆ. ಅದರಲ್ಲೂ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಫೆ.16ರ ನಂತರದಲ್ಲಿ ದಿನವೂ ಲಕ್ಷಾಂತರ ರು. ಮೊತ್ತದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಚುನಾವಣೆ ಎಫೆಕ್ಟ್: ಜಿಲ್ಲೆಯಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ದಿನವೂ ಕನಿಷ್ಟ 10ಸಾವಿರ ಬಾಕ್ಸ್ ವಿವಿಧ ಕಂಪನಿಗಳ ಮದ್ಯ ಮತ್ತು 1 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿರುವ ಅಂಶ ಬಯಲಾಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರಮಾಣ ಏರಿಕೆ ಕಂಡಿದೆ ಎಂದು ಹೇಳಲಾಗಿದ್ದು, ಫೆ.27ರಂದು ಒಂದೇ ದಿನದಲ್ಲಿ 11008 ಬಾಕ್ಸ್ ಗಳ ಮದ್ಯ ಮತ್ತು 2821 ಬಾಕ್ಸ್‌ಗಳ ಬಿಯರ್ ಮಾರಾಟವಾಗಿರುವುದು ಚುನಾವಣೆ ಎಫೆಕ್ಟ್ ಎಂಬುದರಲ್ಲಿ ಸಂದೇಹವಿಲ್ಲ.
ಇಲಾಖೆಯ ಮೂಲಗಳ ಪ್ರಕಾರ ಮಾ.1ರಿಂದ ಮದ್ಯದ ದರದಲ್ಲಿ ಏರಿಕೆಯಾಗಲಿದೆ. ಆನಂತರದಲ್ಲಿ ಚುನಾವಣೆಯು ಅಭ್ಯರ್ಥಿಗಳ ಪಾಲಿಗೆ ಮತ್ತಷ್ಟು ತುಟ್ಟಿಯಾಗುವುದರಿಂದ ಮಾರಾಟಗಾರರು ಈಗಿನಿಂದಲೇ ಮದ್ಯದ ಸಂಗ್ರಹಕ್ಕೆ ಆಸಕ್ತಿ ತೋರಿದ್ದಾರೆಂದು ಗೊತ್ತಾಗಿದೆ.
ಮಾರಾಟ ಹೆಚ್ಚಳ: ಸರ್ಕಾರಕ್ಕೆ ಫೆ.27 ರವರೆಗೆ ಜಿಲ್ಲೆಯಲ್ಲಿ ಒಟ್ಟು 120085 ಬಾಕ್ಸ್ ಗಳಷ್ಟು ಮದ್ಯ ಮತ್ತು 51333 ಬಿಯರ್ ಮಾರಾಟ ವಾಗಿದೆ. ಜನವರಿ ತಿಂಗಳು ಜಿಲ್ಲೆಯಲ್ಲಿ 99260 ಬಾಕ್ಸ್ ಗಳಷ್ಟು ವಿವಿಧ ಕಂಪನಿಗಳ ಮದ್ಯ ಮತ್ತು 46624 ಬಾಕ್ಸ್ ಗಳಷ್ಟು ಬಿಯರ್ ಮಾರಾಟವಾಗಿದೆ. ಫೆಬ್ರವರಿಯಲ್ಲಿ ಕಳೆದ ತಿಂಗಳಿಗಿಂತ 20825 ಬಾಕ್ಸ್ ಮದ್ಯ ಮತ್ತು 4709 ಬಾಕ್ಸ್ ಮದ್ಯ ಹೆಚ್ಚುವರಿಯಾಗಿ ಮಾರಾಟವಾಗಿದೆ.
ಅಬಕಾರಿ ಇಲಾಖೆಯ ಪ್ರಕಾರ ಫೆಬ್ರವರಿ ತಿಂಗಳಿನ ಮಾರಾಟದ ಗುರಿ ರು. 110,547.64 ಲಕ್ಷ ಆಗಿದ್ದು, ಈ ಪೈಕಿ ಈಗಾಗಲೇ ಮಾರಾಟದಲ್ಲಿ ದಾಖಲೆ ಶೇ.108.63 ರಷ್ಟು ಗುರಿ ಸಾಧನೆ ಮಾಡಲಾಗಿದೆ. ತಿಂಗಳ ಪೂರ್ಣಗೊಳ್ಳುವ ಮುನ್ನವೇ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿರುವುದು ಚುನಾವಣೆ ಕಾರಣಕ್ಕೆ ಎಂಬುದು ಸುಳ್ಳಲ್ಲ.
ಮತದಾರರ ಓಲೈಕೆ: ಈಗಾಗಲೇ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಾರಾಟಕ್ಕೆ ರು. 2778.96 ಲಕ್ಷ ಬೆಲೆ ವಿವಿಧ ಕಂಪನಿಗಳ ಮದ್ಯ ಮತ್ತು ರು. 484.16 ಲಕ್ಷ ಬೆಲೆಯ ಬಿಯರ್ ಸರ್ಕಾರದ ಮಾರಾಟ ಮಳಿಗೆಯಿಂದ ಖರೀದಿಸಲಾಗಿದೆ. ಒಂದೆಡೆ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮತದಾರರ ಓಲೈಕೆಗೆ ಅಭ್ಯರ್ಥಿಗಳು ತರಹೇವಾರಿ ಆಮಿಷಗಳನ್ನೊಡ್ಡುವ ಕಾರ್ಯದಲ್ಲಿ ತೊಡಗಿದ್ದಾರೆಂಬ ಮಾತು ಕೇಳಿಬಂದಿದೆ. ಮತದಾರರ ಹಣ ಮತ್ತು ಮದ್ಯದ ಹಂಚಿಕೆ ಚುನಾವಣೆಗಳಲ್ಲಿ ತೀರಾ ಸಾಮಾನ್ಯ ಎಂಬಂಥ ಪರಿಸ್ಥಿತಿಯಿದ್ದು, ಚುನಾವಣೆಯಲ್ಲಿ ಮದ್ಯದ ಹೊಳೆಯೇ ಹರಿಯುವ ಲಕ್ಷಣಗಳು ಈಗಲೇ ಗೋಚರಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement