'ಲೋಕಾ' ಬಲೆಗೆ ಗ್ರಾಮ ಲೆಕ್ಕಿಗ
ಯಾದಗಿರಿ: ಜಮೀನಿನ ವಾರಸುದಾರನ ಹೆಸರು ಬದಲಾವಣೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಮ ಲೆಕ್ಕಿಗ ಪ್ರೇಮಕುಮಾರ ಲೋಕಾಯುಕ್ತ ಬಲೆಗೆ ಬಿದ್ದವರು. ಅದೇ ಗ್ರಾಮದ ಹನುಮಂತ ದೇಸಾಯಿ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ರು. 2 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಸುರಪುರದ ಉಡುಪಿ ಹೋಟೆಲ್ನಲ್ಲಿ ಸಿಕ್ಕಿಬಿದ್ದಿದ್ದಾರೆ. ಹನುಮಂತ ದೇಸಾಯಿ ಅವರ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಜಮೀನನ್ನು ತಾಯಿಯ ಹೆಸರಿಗೆ ಮ್ಯುಟೇಶನ್ ಮಾಡಿಕೊಡಲು ಗ್ರಾಮ ಲೆಕ್ಕಿಗ ಲಂಚ ಕೇಳಿದ್ದರು. ಅದರಂತೆ ಈ ಹಿಂದೆ ರು. 1 ಸಾವಿರ ನೀಡಿದ್ದರು. ಗುರುವಾರ ಮತ್ತೆ ರು. 2 ಸಾವಿರ ಲಂಚ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಲೋಕಾಯುಕ್ತ ಡಿಎಸ್ಪಿ ಆರ್.ಎಚ್.ನಾಯಕ, ಇನ್ಸಪೆಕ್ಟರ್ ಜಗದೀಶ ಹಂಚನಾಳ, ಸಿಬ್ಬಂದಿ ಶ್ರೀನಿವಾಸ, ನಾಗರಾಜ, ಶಬ್ಬೀರ್, ಮುತ್ತಣ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.