ಮಟಮಾರಿ ರಸ್ತೆ ದುರಸ್ತಿಗೆ ಆಗ್ರಹ: ಡಿಸಿಗೆ ದೂರು
ರಾಯಚೂರು: ನಗರದಿಂದ ಮಟಮಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಕರ್ನಾಟಕ ಜನಸೇವಾ ಸಂಘ ದೂರಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿ, ರಾಯಚೂರಿನಿಂದ ಮಟಮಾರಿಗೆ ಆಶಾಪುರ- ಜಾಲಿಬೆಂಚಿ- ಉಡಮಗಲ್ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ದೊಡ್ಡ ತಗ್ಗುಗಳಿದ್ದು, ಅಲ್ಲಲ್ಲಿ ಕಂಕರು, ಮರಂ ಹಾಕಿದ ರಸ್ತೆಯೂ ಇದೆ. ಇಂಥ ರಸ್ತೆಯ ಅವ್ಯವಸ್ಥೆಯಿಂದಾಗಿ ಈ ಮಾರ್ಗದಲ್ಲಿ ದಿನವೂ ಸಂಚರಿಸುವ ನೂರಾರು ವಾಹನಗಳ ಸವಾರರು ಆತಂಕದಲ್ಲಿಯೇ ಪ್ರಯಾಣಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಹದಗೆಟ್ಟ ರಸ್ತೆಯಿಂದಾಗಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರಿವೆ. ಅನೇಕ ವಾಹನ ಸವಾರರು ಅಪಘಾತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ. ಕಾರಣ ರಸ್ತೆಯ ದುಸ್ಥಿತಿ ಹೋಗಲಾಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.