ಸಮಾಜದ ಏಳ್ಗೆ ಬಯಸಿದ ನಿಜಶರಣ ಚೌಡಯ್ಯ
ರಾಯಚೂರು: ಅಜ್ಞಾನ, ಮೂಢನಂಬಿಕೆಗಳನ್ನು ಕಿತ್ತೆಸೆದು ಜನರಿಗೆ ಆಡು ಭಾಷೆಗಳಲ್ಲಿ ವಚನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದ ಮಹಾನ್ ಸಂತ ನಿಜಶರಣ ಅಂಬಿಗರ ಚೌಡಯ್ಯ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಿಪಂ ಅಧ್ಯಕ್ಷೆ ಲಲಿತಮ್ಮ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾರ್ಥಕತೆ ಕಾಣುವಂತೆ ಮನವಿ ಮಾಡಿದರು.
ಧೀಮಂತ ವ್ಯಕ್ತಿ ನೆನೆವ ಸುದಿನ: ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ, ಪ್ರಥಮ ಬಾರಿಗೆ ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿರುವ ಅಂಬಿಗರ ಚೌಡಯ್ಯ ಅವರ ಜಯಂತಿಯಲ್ಲಿ ಆ ಧೀಮಂತ ವ್ಯಕ್ತಿಯನ್ನು ನೆನೆಯುವ ಸುದಿನ ಇದಾಗಿದೆ ಎಂದರು.
ಅಂಬಿಗರು ಜೀವನದ ಭವಸಾಗರ ದಾಟಿಸುವವರು. ನದಿಯ ಈ ದಡದಿಂದ ಆ ದಡ ಸೇರಿರುವವರೆಗೆ ಜೀವ ಅಂಗೈಯಲ್ಲಿ ಹಿಡಿದಿರುವ ಮನುಷ್ಯ ದಡ ಸೇರಿದಾಗ ಆಗುವ ಆನಂದವೇ ಅಂಬಿಗರ ಕಸಬಾಗಿದೆ. ಗಂಗಾ ಮತಸ್ಥರು ಬಸವಾದಿ ಶರಣರಾಗಿದ್ದರು ಎಂದು ಶ್ಲಾಘಿಸಿದರು.
ಜಾತಿ ಪದ್ಧತಿ ನಿರ್ಮೂಲನೆ, ದೇವರನ್ನು ಕಾಣಲು ಜಾತಿ ಬೇಡ. ಬದುಕನ್ನು ಹಸನಾಗಿಸು ಎಂಬ ಸಂದೇಶವನ್ನು ಶರಣರು ಸಮಾಜಕ್ಕೆ ನೀಡಿದ್ದಾರೆ ಎಂದರು.
ಅನ್ನದಾನಕ್ಕೆ ಮಹತ್ವ ನೀಡಿದ್ದರು: ಉಪನ್ಯಾಸಕಿ ಉಮಾ ಮಹೇಶ್ವರಿ ಉಪನ್ಯಾಸ ನೀಡಿ, ಬಸವಣ್ಣನವರ ತತ್ವ, ಬಡವ ಬಲ್ಲಿದರಲ್ಲಿ ಸಮಾನತೆ ತಳಹದಿಯನ್ನು ಅಂಬಿಗರ ಚೌಡಯ್ಯನವರು ರಚಿಸಿದ್ದರು. ಗುಡಿ- ಮಠಗಳು ಶೋಷಣೆ ತಾಣಗಳಾಗುತ್ತವೆ ಎಂದಿದ್ದ ಅವರು, ಅನ್ನದಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಹೇಳಿದರು.
ಸಮಾಜದ ಮುಖಂಡ, ನಗರಸಭೆ ಸದಸ್ಯ ಕೆ.ಶಾಂತಪ್ಪ, ಸರ್ಕಾರದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸುತ್ತಿರುವುದು ಸಂತಸದ ವಿಚಾರ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಎಪಿಎಂಸಿ ಉಪಾಧ್ಯಕ್ಷ ಬಾಬುರಾವ್, ನಗರಸಭೆ ಸದಸ್ಯರಾದ ಕೆ.ಶಾಂತಪ್ಪ, ಶಿವಮೂರ್ತಿ, ಜಿಂದಪ್ಪ, ಹನುಮಂತಪ್ಪ, ಜನಾರ್ದನ, ತಿಮ್ಮಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಗರದ ತಿಮ್ಮಾಪುರ ಪೇಟೆಯ ಅಂಬಿಗರ ಚೌಡಯ್ಯ ವೃತ್ತದಲ್ಲಿ ಪುತ್ಥಳಿಗೆ ಗಂಗಾಮತಸ್ಥ ಸಮಾಜದ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಗೌರವ ಸಲ್ಲಿಸಿದರು. ನಂತರ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ರಂಗಮಂದಿರಕ್ಕೆ ಬಂದು ತಲುಪಿತು.