ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲಂ 371ರ ನಿಮಯ ತಪ್ಪಿದಲ್ಲಿ ತೆಲಂಗಾಣ ಮಾದರಿ ಹೋರಾಟ

Lingaraj Badiger
Updated On : 23 Jan 2013, 11:32 am

ಸಿಂಧನೂರು: ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ವಿಧಿಯ ನಿಯಮಾವಳಿ ಜಾರಿಯಾಗುವಲ್ಲಿ ಏರುಪೇರಾದರೆ ತೆಲಂಗಾಣ ಮಾದರಿ ಹೋರಾಟಕ್ಕೆ ಸಿದ್ಧ ಎಂದು ಹೈ.ಕ. ಹೋರಾಟ ಸಮಿತಿ ಮುಖಂಡ, ಜನ ಸಂಗ್ರಾಮ ಪರಿಷತ್ ರಾಜ್ಯ ಸಂಚಾಲಕ ರಾಘವೇಂದ್ರ ಕುಷ್ಟಗಿ ಎಚ್ಚರಿಸಿದ್ದಾರೆ.
 ತಾಲೂಕಿನ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅದ್ಧೂರಿ ವಿಜಯೋತ್ಸವ ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿ ಸಮೂಹ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ಹೈ.ಕ. ಭಾಗದ ಅಭಿವೃದ್ಧಿಗಾಗಿ ಹೈಕ ಹೋರಾಟ ಸಮಿತಿಯ ದಶಕಗಳ ಹೋರಾಟ ಫಲವಾಗಿ ಕೇಂದ್ರ ಸರ್ಕಾರ ಕಲಂ 371ರ ತಿದ್ದುಪಡಿ ಜಾರಿಗೆ ಕಳೆದ ಎರಡು ತಿಂಗಳ ಹಿಂದೆ ಅಸ್ತು ನೀಡಿದೆ. ಇದಕ್ಕೆ ಇಲ್ಲಿಯ ಜನತೆ ತೃಪ್ತಿ ಪಡುವುದು ಬೇಡ.
  ರಾಜ್ಯ ಸರ್ಕಾರ ನಿಯಮಾವಳಿ ರೂಪಿಸುವಾಗ ಅದರ ಮೇಲೆ ಹದ್ದಿನ ಕಣ್ಣಿಟ್ಟು ನೋಡಬೇಕಾಗಿದೆ. ಇದರಲ್ಲಿ ಸ್ವಲ್ಪ ಅನ್ಯಾಯವಾದರೂ ಮತ್ತೆ ಇಲ್ಲಿನ ವಿದ್ಯಾರ್ಥಿ ಯುವ ಜನರಿಗೆ ಗೋಳಾಟ ತಪ್ಪಿದ್ದಲ್ಲ ಎಂದರು.
ರಾಜಕೀಯ ಪಕ್ಷಗಳೆರಡರ ಸ್ವಾರ್ಥ: ಈ ದೇಶದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ಎಬ್ಬಿಸಲು ಎರಡು ಪ್ರಮುಖ ಪಕ್ಷಗಳು ಪ್ರಯತ್ನ ಮಾಡುತ್ತಿವೆ. ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವವಿದ್ಯಾಲಯ ಆರಂಭಿಸಲು ಕ್ಯಾತೆ ನಡೆಸಿವೆ. ಇದಕ್ಕೆ ಕೇಂದ್ರ ಶಿಕ್ಷಣ ಸಚಿವ ರೆಹಮಾನ ಖಾನ್ ಅವರೇ ರೂವಾರಿಯಾಗಿದ್ದಾರೆ.
  ವಿಶ್ವವಿದ್ಯಾಲಯ ಹೆಸರಿಡಲು ಪರ- ವಿರೋಧದ ಮಾತುಗಳು ದೊಡ್ಡ ಧ್ವನಿಯಾಗಿ ಪರಿಣಮಿಸುತ್ತಲಿವೆ. ಈಗಾಗಲೇ ಶೈಕ್ಷಣಿಕವಾಗಿ ಮುಂದುವರೆದ ಮೈಸೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಕ್ಕಿಂತ ಹಿಂದುಳಿದ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಆರಂಭಿಸಲಿ ಎಂದು ಕುಷ್ಟಗಿ ಹೇಳಿದಾಗ ಮತ್ತೆ ವಿದ್ಯಾರ್ಥಿಗಳಿಂದ ಚಪ್ಪಾಳೆಗಳ ಸುರಿಮಳೆ ಹರಿಯಿತು.
ಸರ್ಕಾರದ ಕಡೆಗಣನೆ: ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕಲಂ ಜಾರಿ ವಿಷಯದಲ್ಲಿ ನಿಯಮಗಳ ರಚನೆಯಲ್ಲಿ ಯಾವುದೇ ಕಾರಣಕ್ಕೆ ಅನ್ಯಾಯವಾಗಬಾರದು. ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತು ಸಿಗಬೇಕು. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮೇಲೆ ಸರ್ಕಾರ ದಬ್ಬಾಳಿಕೆ ಮಾಡಿದೆ. ಬಯಲು ಸೀಮೆ, ಕರಾವಳಿ ಅಭಿವೃದ್ಧಿಗೆ ಯಥೇಚ್ಛ ಹಣ ನೀಡಲಾಯಿತು.  ಆದರೆ ಅಷ್ಟೇ ಪ್ರಮಾಣದಲ್ಲಿ ಹೈ-ಕ ಭಾಗದ ಪ್ರಾತಿನಿಧಿಕ ಸಂಸ್ಥೆ ಹೆಚ್ಕೆಡಿಬಿಗೆ ಹಣ ನೀಡದೇ ವಂಚಿಸಲಾಯಿತು. ಇದರಿಂದ ಈ ಭಾಗ ಮತ್ತಷ್ಟು ಹಿಂದುಳಿಯಲು ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ಹೈ-ಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಜಾಕ್ ಉಸ್ತಾದ್, ಬಸವಂತರಾಯ ಕುರಿ, ಶಾಸಕ ವೆಂಕಟರಾವ ನಾಡಗೌಡ ಹೈ-ಕ ಭಾಗಕ್ಕಾದ ಅನ್ಯಾಯಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
 ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಜನ ಸಂಗ್ರಾಮ ಪರಿಷತ್ ಸದಸ್ಯ ಮಹ್ಮದ್ ಮಮ್ತಾಜ್, ಕಾಂಗ್ರೆಸ್ ಯುವ ಮುಖಂಡ ರಾಜೇಂದ್ರಗೌಡ ಬಾದರ್ಲಿ ಮತ್ತಿತರರು ಉಪಸ್ಥಿತರಿದ್ದರು.
ವೆಂಕನಗೌಡ ವಟಗಲ್ ಸ್ವಾಗತಿಸಿದರು. ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಶರಣು ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ  ಶಾಲಾ- ಕಾಲೇಜುಗಳ ಆಡಳಿತ ಮಂಡಳಿ ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement