ಸುರಾನಾ ಕಂಪನಿ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ
ರಾಯಚೂರು: ಸುರಾನಾ ಕೈಗಾರಿಕಾ ಘಟಕದ ಆಡಳಿತ ಮಂಡಳಿಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಾರ್ಮಿಕ ವಿರೋಧಿ ನೀತಿ ಕೈಬಿಡಬೇಕು. ಸಿಬ್ಬಂದಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕೆಂದು ಸುರಾನಾ ಕಾರ್ಮಿಕರ ಸಂಘದ ಕಾರ್ಮಿಕ ನಾಯಕ ಶರಣೇಗೌಡ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಕಾರ್ಮಿಕರ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಸುರಾನಾ ಕೈಗಾರಿಕಾ ಘಟಕದಲ್ಲಿ ಕಾರ್ಯನಿರ್ವಹಿಸಿತ್ತಿದ್ದ 7 ಜನ ಸಿಬ್ಬಂದಿಯನ್ನು ಆಡಳಿತ ಸೇವೆಯಿಂದ ವಜಾಗೊಳಿಸಿತ್ತು. 138 ಕಾರ್ಮಿಕರಿಗೆ ಒಂದು ವಾರದ ವೇತನ ಹಾಗೂ ವೇತನ ಬಡ್ತಿ ಕಡಿತಗೊಳಿಸಿದ್ದನ್ನು ವಿರೋಧಿಸಿ ಇತ್ತೀಚೆಗೆ ಕಂಪನಿಯ ಮುಂದೆ ಧರಣಿ ನಡೆಸಿದ್ದರಿಂದ 7 ಜನರ ವಜಾ ಆದೇಶ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಕಂಪನಿ ನಷ್ಟದಲ್ಲಿದೆಯಂತೆ: ಕಾರ್ಮಿಕರು ನಡೆಸಿದ ಹೋರಾಟದ ಫಲವಾಗಿ ವಜಾಗೊಂಡ ಕಾರ್ಮಿಕರನ್ನು ಹಿಂಪಡೆದು ವೇತನ ಬಡ್ತಿ ನೀಡುವ ಭರವಸೆಯನ್ನು ಕಂಪನಿಯ ಆಡಳಿತ ಮಂಡಳಿ ನೀಡಿದೆ. ಕಾರ್ಮಿಕರಿಗೆ ನಿಯಮಾನುಸಾರ ಪ್ರತಿ ವರ್ಷ ವೇತನ ಪರಿಷ್ಕರಿಸುವಂತೆ ಒತ್ತಾಯಿಸಿದರೆ ಕಂಪನಿ ನಷ್ಟದಲ್ಲಿರುವುದಾಗಿ ಕಂಪನಿ ಅಧಿಕಾರಿಗಳು ಹೇಳುತ್ತಿದ್ದಾರೆಂದು ಆರೋಪಿಸಿದರು.
ವಾಸ್ತವವಾಗಿ ಕಂಪನಿ ಲಾಭದಲ್ಲಿರುವ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಲಭ್ಯವಿದ್ದರೂ ಆಡಳಿತವು ನಷ್ಟದಲ್ಲಿದೆ ಎಂದು ಕಾರ್ಮಿಕರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ಸುರಾನಾ ಕಂಪನಿಯಲ್ಲೂ ಪ್ರತಿ ವರ್ಷ 1.28 ದಶ ಲಕ್ಷ ಟನ್ ಮೆದು ಕಬ್ಬಿಣ ಉತ್ಪಾದಿಸಲಾಗುತ್ತಿದೆ. 2.25 ದಶ ಲಕ್ಷ ಟನ್ ಕಬ್ಬಿಣ ಉತ್ಪಾದಿಸಲಾಗುತ್ತಿದೆ. 35 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ ಹೊಂದಿದೆ ಎಂದು ತಿಳಿಸಿದರು.
ಕಾರ್ಮಿಕ ವಿರೋಧಿ ನೀತಿ: 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 2 ಘಟಕಗಳನ್ನು ಸ್ಥಾಪಿಸುವ ಉದ್ದೇಶ ಕಂಪನಿಯದ್ದಾಗಿದೆ. ಇಷ್ಟೆಲ್ಲಾ ಸಾಮರ್ಥ್ಯ ಹೊಂದಿದ ಕಂಪನಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಬಳ್ಳಾರಿ ಗಣಿಗಾರಿಕೆಯಾಧರಿಸಿ ಸ್ಟೀಲ್ ಮೆಲ್ಟಿಂಗ್ ಸ್ಟೋರ್ ಘಟಕ ನಿರ್ವಹಿಸಲಾಗುತ್ತಿದ್ದು, ಸುಪ್ರಿಂಕೋರ್ಟ್ ಆದೇಶದ ನಂತರ ಅದಿರು ಉತ್ಪಾದನೆ ನಿರ್ಬಂಧದ ಹಿನ್ನೆಲೆಯಲ್ಲಿ ಘಟಕ ಮುಚ್ಚಲಾಗಿದೆ.
ಆದರೆ ಘಟಕದಲ್ಲಿ ಕೆಲಸ ಮಾಡುವ ಸುಮಾರು 150 ಜನ ಕಾರ್ಮಿಕರನ್ನು ಸೇವೆಯಿಂದ ತೆಗೆದು ಹಾಕಲು ಆಡಳಿತ ಮಂಡಳಿ ಮುಂದಾಗಿರುವುದು ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ ಎಂದು ಟೀಕಿಸಿದರು.
ಉದ್ಯೋಗ ಭದ್ರತೆ ನೀಡಲು ಆಗ್ರಹ: ಕೂಡಲೇ ಕಾರ್ಮಿಕರನ್ನು ವಜಾಗೊಳಿಸುವ ನಿರ್ಧಾರ ಕೈಬಿಡಬೇಕು. ಎಲ್ಲ ಕಾರ್ಮಿಕರನ್ನು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡಲು ಅನುಕೂಲ ಕಲ್ಪಿಸಬೇಕು. ವೇತನ ಪರಿಷ್ಕರಣೆ ಮಾಡಬೇಕು. ಉದ್ಯೋಗ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು. ಸುರಾನಾ ಕೈಗಾರಿಕಾ ಕಾರ್ಮಿಕರ ಸಂಘದ ಮುಖಂಡರಾದ ಲಕ್ಷ್ಮೀರೆಡ್ಡಿ, ಸೂಗನಗೌಡ, ಬಾಬಣ್ಣ, ಲಿಂಗಪ್ಪ, ಶರಣಪ್ಪ, ರವಿ ಕುಮಾರ, ಜೈರಾಮ್, ಎಚ್.ಪದ್ಮಾ, ಪ್ರವೀಣರೆಡ್ಡಿ, ನಾಗೇಂದ್ರ ಇದ್ದರು.