ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಕಾಮಗಾರಿ ತ್ವರಿತಕ್ಕೆ ಆದೇಶ
ರಾಯಚೂರು: ಜಿಲ್ಲೆಯಲ್ಲಿ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಅನುದಾನದಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಮಿತಿಯ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಬುಧವಾರ ಸಂಜೆ ಕರೆದಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಜಾರಿಯಲ್ಲಿರುವ ಯೋಜನೆಯ ಕಾಮಗಾರಿಗಳು ಸಾಕಷ್ಟು ವಿಳಂಬವಾಗುತ್ತಿವೆ. ಅದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ವಿಳಂಬ- ಗುತ್ತಿಗೆ ಟೆಂಡರ್ ರದ್ದುಗೊಳಿಸಿ: ಹೈದ್ರಾಬಾದ್ ಕರ್ನಾಟಕ ಭಾಗ ತೀರಾ ಹಿಂದುಳಿದಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಮಿತಿಯನ್ನು ರೂಪಿಸಿ ಕೋಟ್ಯಂತರ ರು. ಅನುದಾನ ನೀಡಿದೆ. ಆದರೆ ಸರ್ಕಾರದ ಯೋಜನೆಗಳ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಗುತ್ತಿಗೆ ಸಂಸ್ಥೆಗಳ ಟೆಂಡರ್ ರದ್ದುಗೊಳಿಸಿ ಬೇರೆಯವರಿಗೆ ಕಾಮಗಾರಿ ವಹಿಸಲು ಆದೇಶಿಸಿದರು.
ದೇವದುರ್ಗ ಐಟಿಐ ಕಾಲೇಜಿನ ನಿರ್ಮಾಣ ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಮಿತಿಯಿಂದ 3 ಕೋಟಿ ನೀಡಿದ್ದರೂ ಕಾಮಗಾರಿ ವೇಗ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ನೀಡಿದ ಗುತ್ತಿಗೆ ರದ್ದುಗೊಳಿಸಿ ಬೇರೆ ಸಂಸ್ಥೆಗೆ ವಹಿಸಿಕೊಡಲು ಸೂಚಿಸಿದರು.
ಹೈ.ಕ. ಭಾಗ ಅಭಿವೃದ್ಧಿಗೆ ಒತ್ತು: ಮುಂದಿನ ದಿನಗಳಲ್ಲಿ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗುತ್ತದೆ. ಸಿಎಂ ಜಗದೀಶ್ ಶೆಟ್ಟರ್ ಅವರು ನಂಜುಂಡಪ್ಪ ವರದಿ ಸಮಿತಿಗೆ ರಾಜ್ಯದ 114 ತಾಲೂಕುಗಳು ಸೇರಿದ್ದರೂ, ಹೈ.ಕ. ಭಾಗಕ್ಕೆ ಹೆಚ್ಚಿನ ಒತ್ತು ನೀಡಲು ಸೂಚಿಸಿದ್ದಾರೆಂದು ಅವರು ಸಭೆಯಲ್ಲಿ ತಿಳಿಸಿದರು.
ಈ ವೇಳೆ ವಿವಿಧ ಇಲಾಖೆಗಳ ಪ್ರಗತಿಯನ್ನು ಅಧ್ಯಕ್ಷ ತ್ರಿವಿಕ್ರಮ್ ಜೋಷಿ ಪರಿಶೀಲಿಸಿದರು.