ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮರಳು ದಂಧೆ: ಲೋಕೋಪಯೋಗಿ ಇಲಾಖೆ ಮೌನ

Lingaraj Badiger
Updated On : 24 Jan 2013, 10:59 am

ಸಿಂಧನೂರು: ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಅಕ್ರಮ ಮರಳು ದಂಧೆ ಅತಿರೇಖ ಸ್ಥಿತಿಗೆ ತಲುಪಿದ್ದು ನಿಯಂತ್ರಣ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಮೌನ ಪಾತ್ರ ನಿರ್ವಹಿಸಿದೆ.
ಸರ್ಕಾರದ ನಿಯಮದಂತೆ ಈಗಾಗಲೇ ಹೆಡಿಗಿನಾಳ, ಬ್ಲಾಕ್‌ನ್ನು 1 ಮತ್ತು ಬ್ಲಾಕ್‌ನ್ನು 2, ಗೋನಾಳ ಬಳಿ ಬರುವ ಹಳ್ಳಕ್ಕೆ ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ. ಹಗಲು ಸಮಯದಲ್ಲಿ ಲೋಕೋಪಯೋಗಿ ಇಲಾಖೆ ರಾಜಧನ ಪಾವತಿಸಿ ಟ್ರ್ಯಾಕ್ಟರ್ ಮಾಲೀಕರು ತರಬೇಕಾಗಿದೆ. ಆದರೆ ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನದಿಂದ ಪ್ರಶ್ನಿಸುವಂತಾಗಿದೆ.
ರಾತ್ರೋರಾತ್ರಿ ಸಾಗಣೆ: ನಗರದ ಪಕ್ಕದಲ್ಲಿರುವ ಹಿರೇಹಳ್ಳದ ಸೇತುವೆ ಬಳಿ ರಾತ್ರೋರಾತ್ರಿ ಮರಳನ್ನು ಅಕ್ರಮವಾಗಿ ತುಂಬಲಾಗುತ್ತಿದೆ. ಸೇತುವೆಯ ಮೇಲೆ ಹತ್ತಾರು ಟ್ರ್ಯಾಕ್ಟರ್‌ಗಳು ನಿಂತರೂ ಲೋಕೋಪಯೋಗಿ ಇಲಾಖೆ ಕ್ಯಾರೆ ಎನ್ನುತ್ತಿಲ್ಲವೆಂದು ಸಾರ್ವಜನಿಕರು ಆಪಾದಿಸಿದ್ದಾರೆ. ಮಸ್ಕಿ ರಸ್ತೆಯಲ್ಲಿ ಬರುವ ಮಲ್ಲಾಪುರು, ಕಲ್ಲೂರು, ದೇವರಗುಡಿ, ಹನುಮಂತನಹಳ್ಳಿ, ಸುಕಾಲಪೇಟೆ, ವಳಬಳ್ಳಾರಿ ರಸ್ತೆಗಳ ಹಳ್ಳದಲ್ಲಿ ರಾತ್ರೋರಾತ್ರಿ ಅಕ್ರಮ ಮರಳು ಸಾಗಾಣಿಕೆಯಾಗುತ್ತಿದೆ. ಬೂದಿವಾಳ ಹಳ್ಳದಿಂದಲೂ ನೂರಾರು ಟ್ರ್ಯಾಕ್ಟರ್‌ಗಳು ಉಸುಕು ಹೇರಿಕೊಂಡು ಸಿಂಧನೂರಿಗೆ ಬರುತ್ತಿವೆ. ಬೆಳಗುರ್ಕಿ ಬಳಿ ಹಳ್ಳದಿಂದಲೂ ಹತ್ತಾರು ಟ್ರ್ಯಾಕ್ಟರ್‌ಗಳು ಬರುತ್ತಿವೆ. ಇಷ್ಟೆಲ್ಲಾ ಟ್ರ್ಯಾಕ್ಟರ್ ಉಸುಕು ನಗರಕ್ಕೆ ಬರುತ್ತಿದೆ. ಆದರೆ ಗ್ರಾಹಕರು ಮಾತ್ರ ಭಾರಿ ಪ್ರಮಾಣದ ಹಣ ತೆತ್ತಬೇಕಾಗಿದೆ. ಸಿಮೆಂಟ್ ದರಕ್ಕಿಂತ ಉಸುಕಿನ ದರವೇ ಅಧಿಕವಾಗಿದೆ. ಸಿರುಗುಪ್ಪಾ ತಾಲೂಕಿನ ಬಾಗೋಡಿಯಿಂದ ಬರುವ ಟಿಪ್ಪರ್‌ಗಳನ್ನಾದರೂ ನಿಯಂತ್ರಿಸುವ ಕೆಲಸ ಆಗಲಿ ಎನ್ನುವುದು ನಾಗರಿಕರ ಒತ್ತಾಯ.
ಕಾಟಾಚಾರದ ಕ್ರಮ: ಜ.7 ರಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಕ್ರಮ ಮರಳು ದಂಧೆ ರದ್ದುಪಡಿಸುವಂತೆ ಗಂಗಣ್ಣ ಡಿಶ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಯಿತು. ಆಗ ಕಾಟಾಚಾರಕ್ಕೆ ತಹಸೀಲ್ದಾರು 3 ಟ್ರ್ಯಾಕ್ಟರ್‌ಗಳನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರನ್ನು ಮಾತನಾಡಿಸಿದರೆ ತಮಗೆ ಅರಾಮಿಲ್ಲ. ಆಸ್ಪತ್ರೆಯಲ್ಲಿದ್ದೇನೆ ಎಂದು ಕುಂಟು ನೆಪ ಹೇಳುತ್ತಾ ಪತ್ರಕರ್ತರಿಗೂ ಸರಿಯಾದ ಮಾಹಿತಿ ನೀಡದೆ ನುಣುಚಿಕೊಳ್ಳುತ್ತಿದ್ದಾರೆ.
ಲಂಚ ಕೊಟ್ಟು ಉಸುಕು: ಅಕ್ರಮವಾಗಿ ಮರಳು ದಂಧೆ ಮಾಡುತ್ತಿರುವ ಟ್ರ್ಯಾಕ್ಟರ್ ಮಾಲೀಕರು ಲೋಕೋಪಯೋಗಿ ಇಲಾಖೆ ಲಂಚ ಕೊಟ್ಟು ಉಸುಕು ತರುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ದುಡ್ಡು ಕೊಡದಿದ್ದರೆ ಇಲಾಖೆಯವರು ಸಹಕರಿಸುವುದಿಲ್ಲ. ಜೊತೆಗೆ ಪೊಲೀಸರಿಗೂ ಮಾಮುಲು ಮುಟ್ಟಿಸುತ್ತಿದ್ದೇವೆ ಎಂದು ಗ್ರಾಹಕರನ್ನು ಯಾಮಾರಿಸುತ್ತಿದ್ದಾರೆ. ಟ್ರ್ಯಾಕ್ಟರೊಂದಕ್ಕೆ 2000 ಕೀಳುತ್ತಿರುವ ಅಕ್ರಮ ಮರಳು ಸಾಕಾಣಿಕೆದಾರರು ಗ್ರಾಹಕರನ್ನು ಅತ್ಯಂತ ಕುತಂತ್ರದಿಂದ ಶೋಷಣೆ ಮಾಡುತ್ತಿದ್ದಾರೆಂದು ನಾಗರಿಕರು ಆಪಾದಿಸಿದ್ದಾರೆ. ಇನ್ನೂ ಮುಂದಾದರೂ ಲೋಕೋಪಯೋಗಿ ಇಲಾಖೆಯು ಅಕ್ರಮ ಮರಳು ದಂಧೆಕೋರರ ಮೇಲೆ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಮರಳು ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement