ಇಂದು ದೇವಿ ಪ್ರಾಣ ಪ್ರತಿಷ್ಠಾನ ದಿನಾಚರಣೆ (ಸಂಕ್ಷಿಪ್ತ ಸುದ್ದಿ)
ರಾಯಚೂರು: ನಗರದ ಬಂದರ್ ಗಲ್ಲಿಯಲ್ಲಿ ಜ.26 ರಂದು ಶ್ರೀಇಚ್ಛಾ ವರದಾನಿ ಅಂಬಾಭವಾನಿ ದೇವಸ್ಥಾನದಲ್ಲಿ 10ನೇ ವರ್ಷದ ದೇವಿಯ ಪ್ರಾಣ ಪ್ರತಿಷ್ಠಾಪನಾ ದಿನಾಚರಣೆ ಆಯೋಜಿಸಲಾಗಿದೆ.
ಇದರಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ 5.30ಕ್ಕೆ ಏಕಾದಶ ರುದ್ರಾಭಿಷೇಕ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಬೆಳಗ್ಗೆ 10ಕ್ಕೆ ತಾಯಿ ಶಕ್ತಿ ಮಾತೆಯ ವೃದ್ಧಿಯಾಗಿರುವ ಬೆಳ್ಳಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನೆರವೇರಿಸಲಾಗುತ್ತದೆ.
ಮಧ್ಯಾಹ್ನ 12ಕ್ಕೆ ಅಂಬಾಭವಾನಿ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಕರೆದೊಯ್ಯಲಾಗುತ್ತದೆ. ಮಧ್ಯಾಹ್ನ 12.45ಕ್ಕೆ ದೇವಸ್ಥಾನದ ಪ್ರವೇಶದ್ವಾರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ದೇವಸ್ಥಾನ ಸಮಿತಿ ಮನವಿ ಮಾಡಿದೆ.
ನಾಳೆ ಸ್ವಾಭಿಮಾನಿ ಸಮಾವೇಶ
ರಾಯಚೂರು: ಹುಬ್ಬಳ್ಳಿಯಲ್ಲಿ ರಾಜ್ಯ ಕೊರವರ ಸಮಾಜದ ರಾಜ್ಯ ಮಟ್ಟದ ಸ್ವಾಭಿಮಾನಿ ಸಮಾವೇಶವನ್ನು ಜ.27ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾನವಿ ತಾಲೂಕು ಕೊರಮ, ಕೊರುವ, ಕೊರಚ ಸಮಾಜ ಸೇವಾ ಸಂಘದ ಅಧ್ಯಕ್ಷ ಬಸವರಾಜ ಭಜಂತ್ರಿ ತಿಳಿಸಿದ್ದಾರೆ. ಸಮಾವೇಶವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಮಾಜಿ ಶಾಸಕ ಜಿ.ಚಂದ್ರಣ್ಣ ದೇವನಹಳ್ಳಿ ಅಧ್ಯಕ್ಷತೆ ವಹಿಸುವರು.
ಸಂಘದ ರಾಜ್ಯಾಧ್ಯಕ್ಷ ಜಿ.ಮಾರೇಶ, ಕೆಪಿಸಿಸಿ ಉಪಾಧ್ಯಕ್ಷ ಪಿ.ರಮೇಶ ತುಮಕೂರು ಸೇರಿ ವಿವಿಧ ಪಕ್ಷದಲ್ಲಿನ ಮುಖಂಡರು, ಸಚಿವರು, ಶಾಸಕರು, ಮಾಜಿ ಸಚಿವರು ಹಾಗೂ ರಾಜ್ಯದ ಅನೇಕ ಹಿರಿಯ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ಮಾನವಿ ತಾಲೂಕಿನ ಕೊರಮ, ಕೊರುವ ಕೊರಚ ಸಮಾಜದವರು ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.
ಜೂಜಾಟ ಅಡ್ಡೆ ಮೇಲೆ ದಾಳಿ; 8 ಜನರ ಬಂಧನ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗ್ರಾಮದ ಮಲ್ಲಪ್ಪ, ದುರಗಪ್ಪ, ಮಹಾಮನಿ, ರಮೇಶ, ರಮೇಶ ಜಾಡಲದಿನ್ನಿ, ಬಸವರಾಜ, ಜಯಪ್ಪ ಮತ್ತು ಮೌನೇಶ ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ 42 ಸಾವಿರ ನಗದು ಹಾಗೂ ಮೂರು ಮೊಬೈಲ್ ಜಪ್ತಿ ಮಾಡಿದ್ದಾರೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್; ಒಬ್ಬ ಬಂಧನ
ರಾಯಚೂರು: ಲಿಂಗಸ್ಗೂರು ತಾಲೂಕಿನ ಮಸ್ಕಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ಅಂಬಾಸಾ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ. ಪಟ್ಟಣದ ಸಪ್ತಗಿರಿ ಬಾರ್ ಮತ್ತು ರೆಸ್ಟೋರೆಂಟ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ಮಾಡಿದಾಗ ಅಂಬಾಸಾ ಸಿಕ್ಕು ಬಿದ್ದಿದ್ದು, ಲಕ್ಷ್ಮಣ, ಶರಣಪ್ಪ, ಬಸವರಾಜ ಎಂಬುವವರು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 830 ಜಪ್ತಿ ಮಾಡಿದ್ದಾರೆ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ಸಿಂದ ಇಂದು ಗಣರಾಜ್ಯೋತ್ಸವ
ರಾಯಚೂರು: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜ. 26ರಂದು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8.30ಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದು, ಪಕ್ಷದ ಪ್ರಮುಖರೆಲ್ಲರೂ ಪಾಲ್ಗೊಳ್ಳುವಂತೆ ಪಕ್ಷದ ಪ್ರಕಟಣೆ ತಿಳಿಸಿದೆ.
ಹಕ್ಕುಪತ್ರಕ್ಕೆ ಆಗ್ರಹಿಸಿ 28ರಿಂದ ಧರಣಿ
ರಾಯಚೂರು: ಮಾನವಿ ಪಟ್ಟಣದ 22ನೇ ವಾರ್ಡಿನ ಸೋನಿಯಾ ಗಾಂಧಿ ನಗರದ ಅರ್ಹ ಫಲಾನುಭವಿಗಳಿಗೆ ನಿವೇಶನಗಳ ಹಂಚಿಕೆಯ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಜ.28ರಂದು ಮಾನವಿಯ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸೋನಿಯಾ ಗಾಂಧಿ ಆಶ್ರಯ ನಿವೇಶನಗಳ ಹೋರಾಟ ಸಮಿತಿ ತಿಳಿಸಿದೆ. ಇಲ್ಲಿನ ನಿವಾಸಿಗಳಿಗೆ ಆಶ್ರಯ ಯೋಜನೆಯಡಿ 32 ಎಕರೆ ಜಮೀನು ನೀಡಲಾಗಿದೆ. ನಿವೇಶನ ಸಿದ್ಧವಾಗಿದ್ದರೂ ಅವುಗಳ ಹಂಚಿಕೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದೆ.
ಹತ್ತಿಗೆ ಬೆಂಕಿ; ಪರಿಹಾರಕ್ಕೆ ಆಗ್ರಹ
ರಾಯಚೂರು: ತಾಲೂಕಿನ ಅರಷಿಣಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸಂಭವಿಸಿದ ಬೆಂಕಿಗೆ ಹತ್ತಿ ಆಹುತಿಯಾಗಿದ್ದು, ರೈತರಿಗೆ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿ, ತಾಲೂಕಿನ ಅರಷಿಣಗಿ ಗ್ರಾಮದಲ್ಲಿ ರೈತ ಗಂಗಪ್ಪ ಎಂಬಾತ ಸಂಗ್ರಹಿಸಿಟ್ಟಿದ್ದ 1.58 ಲಕ್ಷ ಬೆಲೆಯ ಹತ್ತಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿ ಹತ್ತಿ ಬೆಳೆ ಸುಟ್ಟು ನಾಶವಾಗಿದೆ ಎಂದು ದೂರಿದ್ದಾರೆ. ಮಾರುಕಟ್ಟೆಯಲ್ಲಿ ಹತ್ತಿಗೆ ಸೂಕ್ತ ಬೆಲೆಯಿಲ್ಲದ್ದರಿಂದ ರೈತರು ಮನೆಯಲ್ಲಿಯೇ ಹತ್ತಿ ಸಂಗ್ರಹಿಸಿದ್ದು, ಹಾನಿಗೊಳಗಾದ ರೈತನಿಗೆ ಜಿಲ್ಲಾಡಳಿತ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಪ್ಪಸ್ವಾಮಿ, ರೈತ ಗಂಗಪ್ಪ ಮತ್ತಿತರರು ಇದ್ದರು.
ಬಿಎಸ್ಸಾರ್ ಕಾಂಗ್ರೆಸ್ ಪಾರ್ಟಿಗೆ ಸೇರ್ಪಡೆ
ಮಸ್ಕಿ: ಪಟ್ಟಣದ ಬಳಗಾನೂರು ಕ್ರಾಸ್ನಲ್ಲಿನ ಬಿಎಸ್ಸಾಆರ್ ಕಾಂಗ್ರೆಸ್ ಕಚೇರಿಯಲ್ಲಿ ಬಳಗಾನೂರು ಹಾಗೂ ಲಕ್ಷ್ಮೀ ಕ್ಯಾಂಪಿನ ವಿವಿಧ ಪಕ್ಷಗಳಲ್ಲಿನ ಕಾರ್ಯಕರ್ತರು ಮಸ್ಕಿ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶೇಖರಪ್ಪ ತಳವಾರ ಸಮ್ಮುಖದಲ್ಲಿ ಶುಕ್ರವಾರ ಬಿಎಸ್ಆರ್ ಪಕ್ಷಕ್ಕೆ ಸೇರಿದರು. ಪಕ್ಷದ ಸಂಚಾಲಕ ಸಂಜಯಕುಮಾರ ಜೈನ್, ಮೌನೇಶ ಮುರಾರಿ, ಮಹಾಂತೇಶ ಜಾಲವಾಡಗಿ, ಭೀಮಣ್ಣ ಕಾಸ್ಲಿ, ಆದಪ್ಪ, ಎಂ.ಡಿ.ಅಬು ತುರ್ವಿಹಾಳ, ಮಹಾಂತೇಶ ಆನಂದಗಲ್, ಆರ್.ಸಿ.ನದಾಫ್, ಯಮನೂರ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.
ಬಾಲಯ್ಯ ನಾಯಕ
ದೇವದುರ್ಗ: ಹಿರಿಯ ರಾಜಕಾರಣಿ ಹಾಗೂ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಬಾಲಯ್ಯ ನಾಯಕ ಭೋಗಿರಾಮನಗುಂಡ(85) ಶುಕ್ರವಾರ ಬೆಳಗಿನ ಜಾವ ನಿಧನರಾದರು. ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಮೂವರು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಹಿರಿಯ ರಾಜಕಾರಣಿ ಬಾಲಯ್ಯ ನಾಯಕ ಅವರ ನಿಧನಕ್ಕೆ ಮಾಜಿ ಸಂಸದ ಎ. ವೆಂಕಟೇಶ ನಾಯಕ, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ಸದಸ್ಯ ರಾಮಣ್ಣ ಇರಬಗೇರಾ, ಬಸಯ್ಯ ಶಾಖೆ, ಭೀಮನಗೌಡ ನಾಗಡದಿನ್ನಿ, ಸೇರಿ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.